ಜ್ಞಾನಾರ್ಜನೆ ಜತೆ ಎಲ್ಲರನ್ನೂ ಗೌರವಿಸಿ: ಬಿನೋಯ್

Update: 2019-05-18 16:11 GMT

ಮಂಗಳೂರು, ಮೇ 18: ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿದ ಬಳಿಕ ತಮಗೆ ವಿದ್ಯೆ ಕಲಿಸಿದ ಶಿಕ್ಷಕರನ್ನು ಹಾಗೂ ಸದಾ ಕಾಲ ಪ್ರೋತ್ಸಾಹ ನೀಡುತ್ತಾ ಬೆನ್ನು ತಟ್ಟುವ ಹೆತ್ತವರನ್ನು, ಹಿರಿಯರನ್ನು ಗೌರವಿಸುವ ವಿಚಾರವನ್ನು ಮರೆಯಕೂಡದು. ಬದುಕಿನಲ್ಲಿ ಪದವಿ ಗಳಿಸುವ ಜತೆಯಲ್ಲಿ ಇತರರನ್ನು ಗೌರವಿಸುವುದು ಕೂಡ ಅಗತ್ಯ ಎಂದು ವಿಪ್ರೊ ರೀಜನಲ್ ಕ್ಯಾಂಪಸ್ ಮ್ಯಾನೇಜರ್ ಬಿನೋಯ್ ಕೆ. ಹೇಳಿದರು.

ಅವರು ಶನಿವಾರ ನಗರದ ಅಡ್ಯಾರಿನಲ್ಲಿರುವ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಸಹ್ಯಾದ್ರಿ ಕಾಲೇಜ್ ಆ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನ ಒಂಬತ್ತನೇಯ ಪದವಿ ಪ್ರದಾನ ಕಾರ್ಯಕ್ರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅರಣ್ಯದಲ್ಲಿರುವ ಒಂದೊಂದು ಪ್ರಾಣಿ-ಪಕ್ಷಿಗಳು ಕೂಡ ತನ್ನದೇಯಾದ ರೀತಿಯಲ್ಲಿ ವಿಶಿಷ್ಟತೆಯನ್ನು ಹೊಂದಿವೆ. ವೇಗದ ಓಟಕ್ಕೆ ಚಿರತೆ ಖ್ಯಾತಿ ಗಳಿಸಿದರೆ, ಆನೆ ಗಟ್ಟಿಮುಟ್ಟಾದ ಪ್ರಾಣಿ ಆದರೆ ಎಲ್ಲರಿಗೂ ಸಿಂಹ ರಾಜನಾಗಿರುತ್ತಾನೆ. ಇದೇ ರೀತಿಯಲ್ಲಿ ಕಾಡಿನಲ್ಲಿರುವ ಸಿಂಹ ಬಲಶಾಲಿಯಲ್ಲ, ಯಾವುದೇ ಚಾಕಚಕ್ಯತೆಯನ್ನು ಹೊಂದಿಲ್ಲದಿದ್ದರೂ ಅದರಲ್ಲಿರುವ ಆತ್ಮವಿಶ್ವಾಸ, ಇಟ್ಟುಕೊಂಡಿರುವ ಗುರಿ ಎಲ್ಲವೂ ಒಂದು ಪಾಠವಾಗಿ ಎದುರುಗೊಳ್ಳುತ್ತದೆ ಎಂದರು.

ಬದುಕು ಎನ್ನುವುದು ಸವಾಲಿನ ಹಾದಿ. ಅದನ್ನು ಮೆಟ್ಟಿ ನಿಲ್ಲಲು ನಿಮ್ಮಲ್ಲಿ ಆತ್ಮವಿಶ್ವಾಸ, ಗುರಿ ಮುಟ್ಟುವ ಛಲದ ಜತೆ ನಿರಂತರ ಹೊಸ ವಿಚಾರಗಳನ್ನು ಕಲಿಯುವ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದರು.

ಸಮಾರಂಭದಲ್ಲಿ 700 ಇಂಜಿನಿಯರಿಂಗ್ ಮತ್ತು 21 ಎಂಟೆಕ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಿತು.

ಈ ಸಂದರ್ಭ ಭಂಡಾರಿ ಫೌಂಡೇಶನ್‌ನ ಮಂಜುನಾಥ್ ಭಂಡಾರಿ, ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಶ್ರೀನಿವಾಸ್ ರಾವ್ ಕುನ್ಟೆ, ಸಹ್ಯಾದ್ರಿ ಕಾಲೇಜು ನಿರ್ದೇಶಕ ಡಾ.ಡಿ.ಎಲ್. ಪ್ರಭಾಕರ್, ಉಪ ಪ್ರಾಂಶುಪಾಲ ಎಸ್.ಎಸ್. ಬಾಲಕೃಷ್ಣ, ಅಕಾಡೆಮಿಕ್ ಡೀನ್ ಡಾ.ರಾಜೇಶ್ ಎ. ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News