ಕೇವಲ 1 ಗಂಟೆಯಲ್ಲಿ 320 ಕಿ.ಮೀ. ಕ್ರಮಿಸಲಿದೆ ಈ ರೈಲು !

Update: 2019-05-18 16:25 GMT

ಟೋಕಿಯೊ, ಮೇ 18: ಜಪಾನ್‌ನ ಮುಂದಿನ ತಲೆಮಾರಿನ ‘ಶಿಂಕಾನ್‌ಸೆನ್’ ಬುಲೆಟ್ ರೈಲಿನ ಮೂಲ ಮಾದರಿಯನ್ನು ಗುರುವಾರ ಪರೀಕ್ಷೆಗೊಳಪಡಿಸಲಾಗಿದ್ದು, ಗಂಟೆಗೆ 320 ಕಿಲೋಮೀಟರ್ ವೇಗವನ್ನು ತಲುಪಿದೆ. ಈ ರೈಲನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದಾಗ ಅದು ಅತ್ಯಂತ ವೇಗದ ರೈಲಾಗಲಿದೆ.

ಇನ್ನೊಂದು ದಶಕದಲ್ಲಿ ಅದು ಪ್ರಯಾಣಿಕರನ್ನು ಒಯ್ಯಲು ಆರಂಭಿಸಿದಾಗ ಗಂಟೆಗೆ 360 ಕಿ.ಮೀ. ವೇಗವನ್ನು ತಲುಪಲಿದೆ ಎಂದು ಈಸ್ಟ್ ಜಪಾನ್ ರೈಲ್ವೇ ಹೇಳಿದೆ.

10 ಕಾರು (ಬೋಗಿ)ಗಳನ್ನು ಹೊಂದಿರುವ, ಉದ್ದನೆ ಮೂಗು ಮಾದರಿಯ ತಲೆಯ ರೈಲಿನ ನಿರ್ಮಾಣವನ್ನು ಮೇ ತಿಂಗಳ ಆದಿ ಭಾಗದಲ್ಲಿ ಪೂರ್ಣಗೊಳಿಸಲಾಗಿದೆ. ಇದರ ನಿರ್ಮಾಣಕ್ಕೆ 10 ಬಿಲಿಯ ಯೆನ್ (ಸುಮಾರು 640 ಕೋಟಿ ರೂಪಾಯಿ) ವೆಚ್ಚವಾಗಿದೆ.

ಪರೀಕ್ಷೆಗಳು ಕಳೆದ ವಾರವೆ ಆರಂಭವಾಗಿದ್ದರೂ, ಸೆಂಡೈ ಮತ್ತು ಮೊರಿಯೊಕ ನಡುವೆ ಗುರುವಾರ ನಡೆದ ಪ್ರಾಯೋಗಿಕ ಓಡಾಟವನ್ನು ವೀಕ್ಷಿಸಲು ಮಾಧ್ಯಮಗಳನ್ನು ಕರೆಯಲಾಗಿತ್ತು.

‘‘ಪ್ರಾಯೋಗಿಕ ಓಡಾಟವನ್ನು ನಾವು ಇಂದು ಯಶಸ್ವಿಯಾಗಿ ನಿರ್ವಹಿಸಿದ್ದೇವೆ ಹಾಗೂ ಇನ್ನು ಸುಮಾರು 3 ವರ್ಷಗಳ ಕಾಲ ನಾವು ಪರೀಕ್ಷೆಯನ್ನು ಮುಂದುವರಿಸುತ್ತೇವೆ’’ ಎಂದು ಕಂಪೆನಿಯ ವಕ್ತಾರರೊಬ್ಬರು ಹೇಳಿದರು.

‘ಶಿಂಕಾನ್‌ಸೆನ್’ ರೈಲು ಸೇವೆಗಳನ್ನು 2030-31ರ ಸಾಲಿನಲ್ಲಿ ಸಾರ್ವಜನಿಕರಿಗೆ ತೆರೆಯುವ ಯೋಜನೆಯನ್ನು ಕಂಪೆನಿ ಹೊಂದಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News