ಮುನಿಯಾಲಿನಲ್ಲೊಂದು ದೇಸೀ ತಳಿಗಳ ಗೋಶಾಲೆ ‘ಸಂಜೀವಿನಿ ಫಾರ್ಮ್’

Update: 2019-05-18 16:23 GMT

ಮುನಿಯಾಲು (ಹೆಬ್ರಿ), ಮೇ 18: ಶುದ್ಧ ದೇಸೀ ತಳಿಗಳಾದ ಗುಜರಾತ್‌ನ ಗೀರ್ ತಳಿ ಮತ್ತು ಕರ್ನಾಟಕದ ಮಲೆನಾಡು ಗಿಡ್ಡ ತಳಿಗಳ ದನಗಳ ಗೋಶಾಲೆಯೊಂದು ಇಲ್ಲಿನ 27 ಎಕರೆ ವಿಶಾಲ ಪ್ರದೇಶದಲ್ಲಿ ತಲೆ ಎತ್ತಿದ್ದು, ಇವುಗಳಿಂದ ಪಡೆದ ಪರಿಶುದ್ಧವಾದ, ಗುಣಮಟ್ಟದ, ಪೌಷ್ಟಿಕ ಹಾಲನ್ನು ಶೀಘ್ರವೇ ಸಾರ್ವಜನಿಕರ ಬಳಕೆಗೆ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು ಎಂದು ಮುನಿಯಾಲಿನ ಸಂಜೀವಿ ಫಾರ್ಮ್ ಆ್ಯಂಡ್ ಡೈರಿಯ ಸ್ಥಾಪಕ ಜಿ. ರಾಮಕೃಷ್ಣ ಆಚಾರ್ಯ ತಿಳಿಸಿದ್ದಾರೆ.

ಮೂಡಬಿದರೆಯ ಎಸ್.ಕೆ.ಎಫ್ ಗ್ರೂಫ್ ಆಫ್ ಕಂಪೆನಿಯ ಸಹ ಸಂಸ್ಥೆ ಯಾಗಿರುವ ಸಂಜೀವಿನಿ ಫಾರ್ಮ್ ಎಂಡ್ ಡೈರಿ, ಶುದ್ಧ ದೇಸಿ ತಳಿಯಾದ ಗುಜರಾತ್‌ನ ಗೀರ್ ಹಸುಗಳಿಂದ ಹಾಲನ್ನು ಕರೆದು ಜಿಲ್ಲೆಯಾದ್ಯಂತ ‘ಕ್ಷೀರಾ’ ಬ್ರಾಂಡ್‌ನೊಂದಿಗೆ ಮಾರುಕಟ್ಟೆಗೆ ಪರಿಚಯಿಸಲಾಗುತ್ತದೆ ಎಂದರು.

ನಗರ ಪ್ರದೇಶದ ಸದ್ದುಗದ್ದಲ, ಮಾಲಿನ್ಯಗಳಿಂದ ದೂರವಾಗಿ, ಪ್ರಕೃತಿಯ ರುದ್ರರಮಣೀಯ ಪರಿಸರದ ಶಾಂತ ವಾತಾವರಣದಲ್ಲಿರುವ 27 ಎಕರೆ ಪ್ರದೇಶದಲ್ಲಿರುವ ಸಂಜೀವಿನಿ ಫಾರ್ಮ್ ಜಿಲ್ಲಾ ಕೇಂದ್ರವಾಗ ಉಡುಪಿಯಿಂದ 25 ಕಿ.ಮೀ.. ದೂರದಲ್ಲಿದೆ.
ಗೀರ್ ತಳಿಯ ದನಗಳಿಗೆ ಅಗತ್ಯವಾದ ಸಾವಯವ ಹುಲ್ಲುಗಳನ್ನು ಇಲ್ಲೇ ಯಥೇಷ್ಟವಾಗಿ ಬೆಳೆಯಲಾಗುತ್ತದೆ. ಅವುಗಳ ಆರೋಗ್ಯ ವೀಕ್ಷಣೆ ಹಾಗೂ ರಕ್ಷಣೆಗಾಗಿ ಪರಿಣಿತ ಪಶುವೈದ್ಯರನ್ನು ನೇಮಿಸಲಾಗಿದೆ. ಇಲ್ಲಿನ ಡೈರಿ ದಿನಕ್ಕೆ 1000 ಲೀ.ಹಾಲನ್ನು ಉತ್ಪಾದಿಸಿ, ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನದೊಂದಿಗೆ ಸಾಂಪ್ರದಾಯಿಕ ಗೋಶಾಲೆಯಿಂದ ಸಿಗುವ ತಾಜಾ ಹಾಲನ್ನು ಒದಗಿಸುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದು ರಾಮಕೃಷ್ಣ ಆಚಾರ್ಯ ತಿಳಿಸಿದರು.

ಗೀರ್ ದನಗಳಿಗೆ ಸಾವಯವ ಆಹಾರಗಳಾದ ಗೋದಿಹಿಟ್ಟು, ಬಿಳಿ ಜೋವರ್, ಜೋಳ, ಬಾರ್ಲಿ, ಬಾಜ್ರ, ಹತ್ತಿ ಬೀಜದ ಕೇಕ್, ಮೆಂತೆ, ಸಾಸಿವೆ, ಬೇಕಿಂಗ್ ಸೋಡಾ, ಬೆಲ್ಲ, ಕ್ಯಾಲ್ಸಿಯಂ ಮತ್ತು ಖನಿಜಯುಕ್ತ ಆಹಾರಗಳನ್ನು ನೀಡಲಾಗುತ್ತದೆ. ಇದರಿಂದ ಇಲ್ಲಿ ಪಡೆಯುವ ದೇಸೀ ಹಾಲು ರಾಸಾಯನಿಕ ಮುಕ್ತವಾಗಿವೆ ಹಾಗೂ ಶುದ್ಧ ಮತ್ತು ಸಾವಯವ ರೀತಿಯ ಹಾಲಾಗಿ ಜನತೆಗೆ ದೊರಕಲಿದೆ ಎಂದರು.

ಗೀರ್ ತಳಿಯ ದನವೊಂದು ದಿನಕ್ಕೆ 10 ಲೀ. ಹಾಲು ನೀಡುತ್ತದೆ. ಮಲೆನಾಡು ಗಿಡ್ಡ ದಿನಕ್ಕೆ ಕೇವಲ 3 ಲೀ. ಹಾಲು ನೀಡುತ್ತದೆ. ಈ ದನಗಳು ಸ್ವಚ್ಛಂದವಾಗಿ, ಸ್ವತಂತ್ರವಾಗಿ ಮೇಯುವ ಪರಿಸರವನ್ನು ನಿರ್ಮಿಸಲಾಗಿದೆ. ಇವುಗಳ ಗಂಡು ಕರುಗಳನ್ನು ಮಾರಾಟ ಮಾಡದೆ, ಕ್ರಾಸ್‌ಬ್ರೀಡ್ ವಂಶಾಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಆಚಾರ್ಯ ವಿವರಿಸಿದರು.

ಸದ್ಯ ಗೋಶಾಲೆಯಲ್ಲಿ 36 ಗೀರ್ ದನಗಳಿದ್ದು, ಇವುಗಳನ್ನು ಗುಜರಾತ್ ನಿಂದ ತರಿಸಲಾಗಿದೆ. ಶೀಘ್ರವೇ ಇವುಗಳ ಸಂಖ್ಯೆ 100ಕ್ಕೇರಲಿದೆ. ಇದರೊಂದಿಗೆ 100 ಮಲೆನಾಡು ಗಿಡ್ಡ ದನಗಳ ಸಾಕಣೆ, ತಳಿ ಸಂವರ್ಧನೆಗೂ ನಿರ್ಧರಿಸಲಾ ಗಿದೆ. ಇವುಗಳಿಗೆ ಪ್ರಾಕೃತಿಕ ರೀತಿಯಲ್ಲೇ ಗರ್ಭಧಾರಣೆಗೆ ಬೇಕಾದ ಸೌಲಭ್ಯ ಗಳಿದ್ದು, ಪ್ರಸವ ಕೋಣೆಗಳನ್ನೂ ನಿರ್ಮಿಸಲಾಗಿದೆ.

ಗೀರ್ ತಳಿಯ ದನಗಳಿಂದ ದೊರೆಯುವ ಸಗಣಿಗೆ ಕೆಲವೊಂದು ವಸ್ತುಗಳನ್ನು ಸೇರಿಸಿ ಅತ್ಯಂತ ಫಲದಾಯಕ ಗೊಬ್ಬರವನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು. ಜೊತೆಗೆ ಇಲ್ಲಿ ಉತ್ಪಾದನೆ ಯಾಗುವ ಸೆಗಣಿಗೆ ಔಷಧಿಯ ಗುಣವುಳ್ಳ ಆಯುರ್ವೇದ ಗಿಡಮೂಲಿಕೆಗಳನ್ನು ಸೇರಿಸಿ ಊದುಬತ್ತಿ, ಲೋಬಾನಗಳ್ನೂ ತಯಾರಿಸಲಾಗುವುದು ಎಂದರು.

ಗೀರ್ ತಳಿಯ ದನಗಳಿಂದ ದೊರೆಯುವ ಸಗಣಿಗೆ ಕೆಲವೊಂದು ವಸ್ತುಗಳನ್ನು ಸೇರಿಸಿ ಅತ್ಯಂತ ಫಲದಾಯಕ ಗೊಬ್ಬರವನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು. ಜೊತೆಗೆ ಇಲ್ಲಿ ಉತ್ಪಾದನೆ ಯಾಗುವ ಸೆಗಣಿಗೆ ಔಷಧಿಯ ಗುಣವುಳ್ಳ ಆಯುರ್ವೇದ ಗಿಡಮೂಲಿಕೆಗಳನ್ನು ಸೇರಿಸಿ ಊದುಬತ್ತಿ, ಲೋಬಾನಗಳನ್ನೂ ತಯಾರಿಸಲಾಗುವುದು ಎಂದರು.

ಶೀಘ್ರ ಮಾರುಕಟ್ಟೆಗೆ: ಗೀರ್ ತಳಿಯ ಎ2 ಹಾಲುಗಳನ್ನು ಲೀಟರ್‌ಗೆ 80 ರೂ. ದರದಲ್ಲಿ ಹಾಗೂ ಮಲೆನಾಡು ಗಿಡ್ಡ ತಳಿಯ ಹಾಲನ್ನು ಲೀ. 60 ರೂ. ದರದಲ್ಲಿ ಕ್ಷೀರಾ ಹೆಸರಿನಲ್ಲಿ ಸ್ಟೀಲ್ ಬಾಟಲಿಗಳಲ್ಲಿ ಮಾರುಕಟ್ಟೆಗೆ ಸರಬರಾಜು ಮಾಡುವ ಗುರಿಯಿದೆ. ಹಂತ ಹಂತವಾಗಿ ಕಾರ್ಕಳ, ಮಣಿಪಾಲ, ಉಡುಪಿ, ಮಂಗಳೂರು ನಗರಗಲ್ಲಿ ಈ ಹಾಲು ಲಭ್ಯವಾಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಜಯಪ್ರಕಾಶ್ ಮಾವಿನಕುಳಿ, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಯು.ಕೆ. ಸೀತಾರಾಮ ಆಚಾರ್ಯ, ಸವಿತಾ ರಾಮಕೃಷ್ಣ ಆಚಾರ್ಯ, ಸಂಜಯ ಪ್ರಭು, ನಿತ್ಯಾನಂದ ಪೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News