ವಿಶ್ವಸಂಸ್ಥೆಯಿಂದ ಶಾಂತಿಪಾಲನಾ ವೆಚ್ಚ 25,325 ಕೋಟಿ ರೂ. ಬಾಕಿ: ಭಾರತ ಕಳವಳ

Update: 2019-05-18 16:25 GMT

ವಿಶ್ವಸಂಸ್ಥೆ, ಮೇ 18: ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಸೈನಿಕರು ಮತ್ತು ಪೊಲೀಸರನ್ನು ಒದಗಿಸುವ ದೇಶಗಳ ವೆಚ್ಚವನ್ನು ಭರಿಸುವಲ್ಲಿ ವಿಶ್ವಸಂಸ್ಥೆ ಮಾಡುತ್ತಿರುವ ವಿಳಂಬದ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.

ಶಾಂತಿಪಾಲನಾ ಕಾರ್ಯಾಚರಣೆಗಳಿಗಾಗಿ ಭಾರತಕ್ಕೆ ವಿಶ್ವಸಂಸ್ಥೆಯು 38 ಮಿಲಿಯ ಡಾಲರ್ (ಸುಮಾರು 267 ಕೋಟಿ ರೂಪಾಯಿ) ಮೊತ್ತವನ್ನು ಪಾವತಿಸಬೇಕಾಗಿದೆ.

ಪಾವತಿಯಲ್ಲಿ ಆಗುತ್ತಿರುವ ನಿರಂತರ ವಿಳಂಬಗಳ ಹಿನ್ನೆಲೆಯಲ್ಲಿ, ಸೈನಿಕರನ್ನು ಒದಗಿಸುವ ದೇಶಗಳು ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯ ‘ನೈಜ ಹಣಕಾಸು ಪೂರೈಕೆದಾರ’ರಂತಾಗಿದ್ದಾರೆ ಎಂದು ಭಾರತ ಹೇಳಿದೆ.

 ‘‘ಶಾಂತಿಪಾಲನಾ ಕಾರ್ಯಾಚರಣೆಗಾಗಿ ತಗಲಿದ ವೆಚ್ಚವನ್ನು ಸರಿಯಾದ ಸಮಯದಲ್ಲಿ ಮರುಪಾವತಿ ಮಾಡಬೇಕೆಂದು ನಿರೀಕ್ಷಿಸಲಾಗುತ್ತದೆ’’ ಎಂದು ವಿಶ್ವಸಂಸ್ಥೆಯಲ್ಲಿ ಭಾರತೀಯ ಖಾಯಂ ನಿಯೋಗದ ಪ್ರಥಮ ಕಾರ್ಯದರ್ಶಿ ಮಹೇಶ್ ಕುಮಾರ್ ಹೇಳಿದರು.

ಅವರು ಗುರುವಾರ ವಿಶ್ವಸಂಸ್ಥೆಯಲ್ಲಿ ನಡೆದ ‘ವಿಶ್ವಸಂಸ್ಥೆಯ ಆರ್ಥಿಕ ಪರಿಸ್ಥಿತಿಯ ಸುಧಾರಣೆ’ ಎಂಬ ವಿಷಯದ ಕುರಿತ ಐದನೇ ಸಮಿತಿ (ಆಡಳಿತ ಮತ್ತು ಬಜೆಟ್)ಯ ಅಧಿವೇಶನದಲ್ಲಿ ಮಾತನಾಡುತ್ತಿದ್ದರು.

ವಿಶ್ವಸಂಸ್ಥೆ ನೀಡಬೇಕಾಗಿರುವ ಒಟ್ಟು ಬಾಕಿ ಈಗ 3.6 ಬಿಲಿಯ ಡಾಲರ್ (ಸುಮಾರು 25,325 ಕೋಟಿ ರೂಪಾಯಿ) ತಲುಪಿದೆ. ಇದು ವಿಶ್ವಸಂಸ್ಥೆಯ ವಾರ್ಷಿಕ ಬಜೆಟ್‌ನ ಸುಮಾರು ಮೂರನೇ ಒಂದರಷ್ಟಾಗಿದೆ ಎಂದು ಮಹೇಶ್ ಕುಮಾರ್ ನುಡಿದರು. ಅದೂ ಅಲ್ಲದೆ, ವೆಚ್ಚ ಮರುಪಾವತಿ ವಿಳಂಬದಿಂದಾಗಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯೂ ಸೊರಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News