ಕೊಲ್ಲಿಯಲ್ಲಿರುವ ಅಮೆರಿಕದ ಯುದ್ಧ ನೌಕೆಗಳು ಸುಲಭ ಗುರಿ: ಇರಾನ್

Update: 2019-05-18 16:29 GMT

ದುಬೈ, ಮೇ 18: ಕೊಲ್ಲಿ ಸಮುದ್ರದಲ್ಲಿರುವ ಅಮೆರಿಕದ ಯುದ್ಧ ಹಡಗುಗಳ ಮೇಲೆ ತಾನು ಸುಲಭವಾಗಿ ದಾಳಿ ನಡೆಸಬಲ್ಲೆ ಎಂದು ಇರಾನ್ ಶುಕ್ರವಾರ ಹೇಳಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ, ವಾರಗಳಿಂದ ಈ ವಲಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ.

ಕಳೆದ ವಾರಾಂತ್ಯದಲ್ಲಿ ಕೊಲ್ಲಿಯಲ್ಲಿ ನಾಲ್ಕು ತೈಲ ಟ್ಯಾಂಕರ್‌ಗಳ ಮೇಲೆ ದಾಳಿಗಳು ನಡೆದ ಬಳಿಕ, ಇರಾನ್‌ನ ನೆರೆಯ ದೇಶ ಇರಾಕ್‌ನಿಂದ ಅಮೆರಿಕವು ತನ್ನ ಕೆಲವು ರಾಜತಾಂತ್ರಿಕ ಸಿಬ್ಬಂದಿಯನ್ನು ವಾಪಸ್ ಪಡೆದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

‘‘ನಮ್ಮ ಕಿರು ವ್ಯಾಪ್ತಿಯ ಕ್ಷಿಪಣಿಗಳೂ ಪರ್ಸಿಯನ್ ಕೊಲ್ಲಿಯಲ್ಲಿರುವ ಯುದ್ಧನೌಕೆಗಳನ್ನು ಸುಲಭವಾಗಿ ತಲುಪಬಲ್ಲದು’’ ಎಂದು ಪರಿಣತ ಸೇನಾ ತುಕಡಿ ‘ರೆವಲೂಶನರಿ ಗಾರ್ಡ್ಸ್’ನ ಸಂಸದೀಯ ವ್ಯವಹಾರಗಳ ಉಪ ಮುಖ್ಯಸ್ಥ ಮುಹಮ್ಮದ್ ಸಾಲಿಹ್ ಜೊಕರ್ ಹೇಳಿರುವುದಾಗಿ ‘ಫಾರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘‘ಹೊಸ ಯುದ್ಧದ ವೆಚ್ಚವನ್ನು ಭರಿಸಲು ಅಮೆರಿಕಕ್ಕೆ ಸಾಧ್ಯವಾಗದು ಹಾಗೂ ಮಾನವ ಶಕ್ತಿ ಮತ್ತು ಸಾಮಾಜಿಕ ಪರಿಸ್ಥಿತಿಯ ವಿಷಯದಲ್ಲಿ ಆ ದೇಶವು ಕೆಟ್ಟ ಸ್ಥಿತಿಯಲ್ಲಿದೆ’’ ಎಂದು ಅವರು ಅಭಿಪ್ರಾಯಪಟ್ಟರು.

ಅರೇಬಿಯನ್ ಕೊಲ್ಲಿಯಲ್ಲಿ ಹಾರುವ ವಿಮಾನಗಳಿಗೆ ಅಮೆರಿಕದ ಎಚ್ಚರಿಕೆ

ಅರೇಬಿಯನ್ ಕೊಲ್ಲಿಯ ಆಕಾಶದಲ್ಲಿ ಹಾರುವ ವಾಣಿಜ್ಯ ವಿಮಾನಗಳು, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ತಪ್ಪಾಗಿ ಗುರುತಿಸಲ್ಪಡುವ ಸಾಧ್ಯತೆಯಿದೆ ಎಂಬುದಾಗಿ ಅಮೆರಿಕದ ರಾಜತಾಂತ್ರಿಕರು ಶನಿವಾರ ಎಚ್ಚರಿಸಿದ್ದಾರೆ.

ಜಾಗತಿಕ ವಾಯುಯಾನಕ್ಕೆ ಮಹತ್ವದ್ದಾಗಿರುವ ಈ ವಲಯಕ್ಕೆ ಹಾಲಿ ಉದ್ವಿಗ್ನತೆಯು ಒಡ್ಡಿರುವ ಬೆದರಿಕೆಯನ್ನು ಅಮೆರಿಕದ ರಾಜತಾಂತ್ರಿಕರ ಎಚ್ಚರಿಕೆಯು ಎತ್ತಿಹಿಡಿದಿದೆ.

ಅಮೆರಿಕ ಸೇನೆ ನಿಯೋಜನೆಗೆ ಕೊಲ್ಲಿ ದೇಶಗಳ ಅಂಗೀಕಾರ

ಅರೇಬಿಯನ್ ಕೊಲ್ಲಿ ಮತ್ತು ಹಲವಾರು ಕೊಲ್ಲಿ ಸಹಕಾರ ಮಂಡಳಿಯ ದೇಶಗಳ ಜಲಪ್ರದೇಶಗಳಲ್ಲಿ ಸೇನಾ ಪಡೆಗಳನ್ನು ನಿಯೋಜಿಸಲು ಅಮೆರಿಕ ಉದ್ದೇಶಿಸಿದೆ ಎಂದು ಈ ವಲಯದ ಮಾಧ್ಯಮಗಳು ವರದಿ ಮಾಡಿವೆ.

ಈ ಸಂಬಂಧ ಅಮೆರಿಕ ಮಂಡಿಸಿರುವ ಮನವಿಗೆ ಸೌದಿ ಅರೇಬಿಯ ಸೇರಿದಂತೆ ಕೊಲ್ಲಿ ಸಹಕಾರ ಮಂಡಳಿಯ ಹಲವು ದೇಶಗಳು ಅನುಮೋದನೆ ನೀಡಿವೆ ಎಂದು ‘ಅಲ್-ಶರ್ಕ್ ಅಲ್-ಔಸತ್’ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News