2.5 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ನಿರಾಶ್ರಿತರ ನೋಂದಣಿ: ವಿಶ್ವಸಂಸ್ಥೆ

Update: 2019-05-18 16:32 GMT

ಜಿನೇವ (ಸ್ವಿಟ್ಸರ್‌ಲ್ಯಾಂಡ್), ಮೇ 18: ಬಾಂಗ್ಲಾದೇಶದಲ್ಲಿರುವ 2.50 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರನ್ನು ತಾನು ನೋಂದಣಿ ಮಾಡಿರುವುದಾಗಿ ವಿಶ್ವಸಂಸ್ಥೆ ಶುಕ್ರವಾರ ಹೇಳಿದೆ. ಅವರಿಗೆ ಗುರುತು ಚೀಟಿಗಳನ್ನು ವಿತರಿಸಲಾಗಿದೆ ಹಾಗೂ ಭವಿಷ್ಯದಲ್ಲಿ ಮ್ಯಾನ್ಮಾರ್‌ಗೆ ವಾಪಸಾಗುವ ಅವರ ಹಕ್ಕಿಗೆ ಪುರಾವೆಯನ್ನು ಒದಗಿಸಲಾಗಿದೆ ಎಂದಿದೆ.

ನೋಂದಾವಣೆಯು ಮಾನವ ಸಾಗಣೆಯನ್ನು ತಡೆಯುವಲ್ಲಿ ಪೊಲೀಸರಿಗೆ ನೆರವಾಗುತ್ತದೆ ಎಂಬುದಾಗಿಯೂ ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಹೇಳಿದೆ.

‘‘ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ರೊಹಿಂಗ್ಯಾ ನಿರಾಶ್ರಿತರ ಪೈಕಿ ಕಾಲು ಭಾಗಕ್ಕೂ ಹೆಚ್ಚಿನವರನ್ನು ಬಾಂಗ್ಲಾದೇಶದ ಅಧಿಕಾರಿಗಳು ಮತ್ತು ಯುಎನ್‌ಎಚ್‌ಸಿಆರ್ ಜಂಟಿಯಾಗಿ ನೋಂದಾಯಿಸಿವೆ ಹಾಗೂ ಅವರಿಗೆ ಗುರುತು ಚೀಟಿಗಳನ್ನು ನೀಡಿವೆ’’ ಎಂದು ಜಿನೇವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯುಎನ್‌ಎಚ್‌ಸಿಆರ್ ವಕ್ತಾರ ಆ್ಯಂಡ್ರೇಜ್ ಮಹೆಸಿಕ್ ತಿಳಿಸಿದರು.

ಮ್ಯಾನ್ಮಾರ್ ಸೇನೆಯು 2017 ಆಗಸ್ಟ್‌ನಲ್ಲಿ ನಡೆಸಿದ ದಮನ ಕಾರ್ಯಾಚರಣೆಗೆ ಬೆದರಿ ಸುಮಾರು 7.40 ಲಕ್ಷ ರೊಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ. ಅದೂ ಅಲ್ಲದೆ, ಅದಕ್ಕೂ ಮೊದಲು ಮ್ಯಾನ್ಮಾರ್‌ನಿಂದ ಬಂದಿದ್ದ ಸುಮಾರು ಮೂರು ಲಕ್ಷ ರೊಹಿಂಗ್ಯಾ ಮುಸ್ಲಿಮರು ಅದಾಗಲೇ ಬಾಂಗ್ಲಾದೇಶದಲ್ಲಿದ್ದರು.

ರೊಹಿಂಗ್ಯಾ ಮುಸ್ಲಿಮರು ಹಲವು ತಲೆಮಾರುಗಳಿಂದ ಮ್ಯಾನ್ಮಾರ್‌ನಲ್ಲಿ ವಾಸಿಸುತ್ತಿದ್ದರೂ, ಆ ದೇಶವು ಅವರಿಗೆ ಪೌರತ್ವವನ್ನು ನಿರಾಕರಿಸಿದೆ.

2018 ಜೂನ್‌ನಲ್ಲಿ ವಿಶ್ವಸಂಸ್ಥೆಯು ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿತ್ತು.

ವಾಪಸಾಗುವ ಹಕ್ಕಿನ ರಕ್ಷಣೆಗಾಗಿ ನೋಂದಣಿ

 ‘‘ರೊಹಿಂಗ್ಯಾ ನಿರಾಶ್ರಿತರು ಭವಿಷ್ಯದಲ್ಲಿ ಸ್ವಯಂಪ್ರೇರಿತವಾಗಿ ಮ್ಯಾನ್ಮಾರ್‌ಗೆ ವಾಪಸಾಗಲು ಸಾಧ್ಯವಾಗುವಂತೆ ಅವರ ಹಕ್ಕನ್ನು ರಕ್ಷಿಸುವುದಕ್ಕಾಗಿ ಅವರ ನೋಂದಣಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ’’ ಎಂದು ಮಹೆಸಿಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News