ಪಿಆರ್ ಕಾರ್ಡ್ ನಿಯಮ ಸರಳೀಕರಣ: ಐವನ್ ಡಿಸೋಜ

Update: 2019-05-18 17:06 GMT

ಮಂಗಳೂರು, ಮೇ 18: ಪಿಆರ್ ಕಾರ್ಡ್ ನೀಡುವಲ್ಲಿದ್ದ ನಿಯಮ ಇನ್ನಷ್ಟು ಸರಳೀಕರಣವಾಗಲಿದ್ದು, ಈ ಬಗ್ಗೆ ಮುಂದಿನ ವಾರ ಆದೇಶ ಹೊರಬೀಳಲಿದೆ ಎಂದು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ತಿಳಿಸಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್‌ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ನಗರದಲ್ಲಿ ಸ್ಥಿರಾಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ (ಪಿಆರ್ ಕಾರ್ಡ್) ಕಡ್ಡಾಯ ಮಾಡುವುದನ್ನು 2 ತಿಂಗಳು ವಿಸ್ತರಿಸುವಂತೆ ಕಂದಾಯ ಸಚಿವರಿಗೆ ಮನವಿ ಮಾಡಿದ್ದು, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರಕಾರಿ ಆದೇಶ ಹೊರಡಿಸಲು ತೊಡಕಾಗಿದೆ. ನೀತಿ ಸಂಹಿತೆ ಮುಗಿದ ಕೂಡಲೇ ಮುಂದಿನ ವಾರದಲ್ಲೇ ಈ ಆದೇಶವನ್ನು ಸರಕಾರ ಹೊರಡಿಸಲಿದೆ ಎಂದು ತಿಳಿಸಿದ್ದಾರೆ.

ಪ್ರಾಪರ್ಟಿ ಕಾರ್ಡ್ ಕಡ್ಡಾಯವನ್ನು ಮುಂದೂಡಲು ಜಿಲ್ಲಾಧಿಕಾರಿಗೆ ಈಗಾಗಲೇ ವೌಖಿಕವಾಗಿ ತಿಳಿಸಲಾಗಿದೆ. ಆದರೆ ಸರಕಾರದಿಂದ ಆದೇಶ ಬಾರದೆ ಏನೂ ಮಾಡಲಾಗದೆಂದು ಉಪನೋಂದಣಾಧಿಕಾರಿ ಹೇಳಿದ್ದಾರೆ. ನೀತಿ ಸಂಹಿತೆ ಮುಗಿದ ಕೂಡಲೆ ಆದೇಶ ಜಾರಿಯಾಗಲಿದೆ ಎಂದು ಅವರು ಹೇಳಿದರು.

ಸರಕಾರಿ ಭೂಮಿ, ಮಾರಾಟ ಭೂಮಿ ಇತ್ಯಾದಿ ತರಕಾರಿದ್ದರೆ ಪಿಆರ್ ಕಾರ್ಡ್ ನೀಡಲು ಜಿಲ್ಲಾ ಮಟ್ಟದಲ್ಲಿ ಈವರೆಗೆ ಅಧಿಕಾರ ಇರಲಿಲ್ಲ. ಅಂತಹ ಪ್ರಕರಣಗಳನ್ನು ಬೆಂಗಳೂರಿಗೆ ಬರೆದು ಇತ್ಯರ್ಥಗೊಳಿಸಬೇಕಿತ್ತು. ಸಣ್ಣ ಪುಟ್ಟ ತಕರಾರಿದ್ದರೆ ಜಿಲ್ಲಾ ಮಟ್ಟದಲ್ಲೇ ಬಗೆಹರಿಸಿ ಪಿಆರ್ ಕಾರ್ಡ್ ನೀಡಲು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪಿಆರ್ ಕಾರ್ಡ್‌ಗಾಗಿ ಇದುವರೆಗೆ ಬಂದ ಅರ್ಜಿಗಳೆಲ್ಲವನ್ನೂ ವಿಲೇವಾರಿ ಮಾಡಲಾಗಿದೆ. ಯಾವುದೂ ಬಾಕಿ ಉಳಿದಿಲ್ಲ. ಆದರೆ ಆಸ್ತಿ ಮಾಲಕರನೇಕರು ಪಿಆರ್ ಕಾರ್ಡ್ ಮಾಡಿಸಲು ಮುಂದಾಗಿಲ್ಲ. ಅದಕ್ಕಾಗಿ ಮುಂದಿನ 2 ತಿಂಗಳ ವಿಸ್ತರಣೆ ನೀಡಲಾಗುತ್ತಿದೆ. ಅಷ್ಟರೊಳಗೆ ಪಿಆರ್ ಕಾರ್ಡ್ ಮಾಡಿಸುವಂತೆ ಮನವಿ ಮಾಡಿದರು.

ಮುಲ್ಕಿಯಲ್ಲಿ ಸದ್ಯಕ್ಕಿಲ್ಲ: ಮುಲ್ಕಿ ಉಪನೋಂದಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಪಿಆರ್ ಕಾರ್ಡ್ ಮಾಡಿಸುವ ಪ್ರಸ್ತಾಪ ಸರಕಾರದ ಮುಂದಿದ್ದರೂ ಸದ್ಯಕ್ಕೆ ಅದನ್ನು ಜಾರಿಗೊಳಿಸುವ ಚಿಂತನೆ ಸರಕಾರಕ್ಕಿಲ್ಲ. ಈ ಬಗ್ಗೆ ಸರಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಐವನ್ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್, ಮುಹಮ್ಮದ್ ಹನೀಫ್, ಭಾಸ್ಕರ ರಾವ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News