×
Ad

ನಳಿನ್ ಕುಮಾರ್ ಕಟೀಲ್‌ರ ಗಡಿಪಾರಿಗೆ ರೈ ಆಗ್ರಹ: ದ.ಕ.ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

Update: 2019-05-18 22:46 IST

ಮಂಗಳೂರು, ಮೇ 18: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ತಕ್ಷಣ ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಮಹಾತ್ಮಾ ಗಾಂಧೀಜಿಯನ್ನು ಅವಮಾನಿಸಿದ್ದನ್ನು ಖಂಡಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಶನಿವಾರ ಪಕ್ಷದ ಕಚೇರಿ ಮುಂದೆ ನಡೆಸಿದ ಪ್ರತಿಭಟನೆ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜವಾಬ್ದಾರಿಯುತ ಸ್ಥಾನದಲ್ಲಿರುವ ಇವರು ನೀಡಿದ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಇವರ ಹೇಳಿಕೆ ಅಕ್ಷಮ್ಯ ಮತ್ತು ಅಪರಾಧದಿಂದ ಕೂಡಿದೆ. ಇಂತಹ ಹೇಳಿಕೆಗಳಿಗೆ ಕಡಿಾಣ ಹಾಕದೇ ಹೋದರೆ, ಮುಂದಿನ ದಿನಗಳಲ್ಲಿ ಸ್ವಾತಂತ್ರ ಹೋರಾಟಗಾರರನ್ನೆಲ್ಲಾ ಇವರು ದೇಶ ದ್ರೋಹಿಗಳಾಗಿ ಬಿಂಬಿಸಿಯಾರು ಎಂದು ರೈ ಹೇಳಿದರು.

ನಳಿನ್‌ರನ್ನು ದ.ಕ.ಜಿಲ್ಲೆಯ ಸಂಸದ ಎನ್ನಲು ನಾಚಿಕೆಯಾಗುತ್ತದೆ. ಅವರನ್ನು ಗಡಿಪಾರು ಮಾಡುವ ಮೂಲಕ ಸೂಕ್ತ ಪಾಠ ಕಲಿಸಬೇಕು. ಬಿಜೆಪಿಯ ಮೂವರು ನೀಡಿದ ಹೇಳಿಕೆಯ ಬಗ್ಗೆ ಪ್ರಧಾನಿ ಸಹಿತ ಆ ಪಕ್ಷದ ಹಿರಿಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಅವರು ಹೀಗೆ ಮುಂದುವರಿಯಲು ಪ್ರಧಾನಿಯೇ ಕಾರಣ. ವಿಶ್ವದ 140 ರಾಷ್ಟ್ರಗಳಲ್ಲಿ ಮಹಾತ್ಮಾ ಗಾಂಧೀಜಿಯ ಪ್ರತಿಮೆ ಇದೆ. ಜಗತ್ತೇ ಗೌರವಿಸಿರುವ ಮಹಾನ್ ನಾಯಕನ ಬಗ್ಗೆ ನಳಿನ್ ಮತ್ತಿತರರು ನೀಡಿದ ಹೇಳಿಕೆಯನ್ನು ನಾಡಿನ ಪ್ರಜ್ಞಾವಂತರೆಲ್ಲಾ ಖಂಡಿಸಬೇಕಿದೆ ಎಂದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಮಾಜಿ ಮೇಯರ್‌ ಗಳಾದ ಶಶಿಧರ ಹೆಗ್ಡೆ, ಅಬ್ದುಲ್ ಅಝೀಝ್, ಮುಡಾ ಮಾಜಿ ಅಧ್ಯಕ್ಷ ಸುರೇಶ್ ಬಳ್ಳಾಲ್, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಪಕ್ಷದ ಮುಖಂಡರಾದ ಬಲರಾಜ್ ರೈ, ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಸದಾಶಿವ ಶೆಟ್ಟಿ, ವಿಶ್ವಾಸ್ ಕುಮಾರ್ ದಾಸ್, ಅಪ್ಪಿ, ಜೆಸಿಂತಾ ಆಲ್ಫ್ರೆಡ್, ಶಕುಂತಳಾ ಕಾಮತ್, ಆಶಾ ಡಿಸಿಲ್ವಾ, ವಾಸು ಪೂಜಾರಿ, ರತಿಕಲಾ ಕೊಟ್ಟಾರಿ, ವೆಂಕಪ್ಪಪೂಜಾರಿ, ಬಿ.ಎಂ. ಅಬ್ಬಾಸ್ ಅಲಿ, ಅಶ್ರಫ್ ಸೇವಾದಳ, ಎ.ಸಿ. ವಿನಯರಾಜ್, ರಮಾನಂದ ಪೂಜಾರಿ, ಟಿ.ಕೆ.ಸುಧೀರ್, ನೀರಜ್ ಪಾಲ್, ಗಣೇಶ್ ಪೂಜಾರಿ, ಸಂತೋಷ್ ಕುಮಾರ್ ಶೆಟ್ಟಿ, ನಝೀರ್ ಬಜಾಲ್, ಬಿ.ಎಂ. ಭಾರತಿ, ಸಿ.ಎಂ. ಮುಸ್ತಫಾ, ಎಂ.ಪಿ. ಮನುರಾಜ್ ಮತ್ತಿತರರು ಉಪಸ್ಥಿತರಿದ್ದರು.

ಯು.ಎಚ್. ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಬಿ.ಎ. ಮುಹಮ್ಮದ್ ಹನೀಫ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News