×
Ad

ಕಂಕನಾಡಿ: ಪಂಚಾಂಗ ಇಲ್ಲದೆ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ

Update: 2019-05-18 22:47 IST

ಮಂಗಳೂರು, ಮೇ 18: ಕಂಕನಾಡಿಯಲ್ಲಿ ಹಳೆಯ ಮಾರುಕಟ್ಟೆ ಕೆಡವಿ ಹೊಸ ಮಾರುಕಟ್ಟೆ ನಿರ್ಮಿಸುವ ಸಲುವಾಗಿ ಕಂಕನಾಡಿ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸುವ ಮಾರುಕಟ್ಟೆಯನ್ನು ಪಂಚಾಂಗ ಇಲ್ಲದೆ ಕಟ್ಟಿಸಲಾಗುತ್ತಿದೆ ಎಂದು ಕಂಕನಾಡಿ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಆರೋಪಿಸಿದೆ.

ಒಪ್ಪಂದದ ಪ್ರಕಾರ ಹೊಸ ಮಾರುಕಟ್ಟೆಯು 2 ವರ್ಷದೊಳಗೆ ಪೂರ್ಣಗೊಳ್ಳಬೇಕು. ಹಾಗಾಗಿ ತಾತ್ಕಾಲಿಕ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು 2 ವರ್ಷ ಇಲ್ಲೇ ವ್ಯವಹರಿಸುವುದು ಅನಿವಾರ್ಯವಾಗಿದೆ. ಆದರೆ ತಾತ್ಕಾಲಿಕ ಮಾರುಕಟ್ಟೆ ನಿರ್ಮಿಸುವಾಗ ಪಂಚಾಂಗ ಹಾಕಲೇ ಇಲ್ಲ. ಡಾಮಾರಿನ ಮೇಲೆಯೇ ಕಲ್ಲು ಕಟ್ಟಲಾಗಿದೆ. ಮಳೆಗಾಲದಲ್ಲಿ ಹರಿಯುವ ನೀರು ಈ ತಾತ್ಕಾಲಿಕ ಮಾರುಕಟ್ಟೆಯನ್ನು ಆವರಿಸಿ ಸಿಮೆಂಟ್ ಅಥವಾ ತಗಡು ಶೀಟ್ ಸಮೇತ ಉರುಳಿದರೆ ಅಪಾಯ ತಪ್ಪಿದ್ದಲ್ಲ. ಜೊತೆಗೆ ಸಾಮಗ್ರಿಗಳಿಗೂ ಹಾನಿಯಾಗಿ ಅಪಾರ ನಷ್ಟವಾಗಬಹುದು ಎಂಬ ಮಾತು ಕೇಳಿ ಬರುತ್ತಿದೆ.

ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಕಂಕನಾಡಿ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಲಿ ಹಸನ್ ‘ಸದ್ಯ ಬಸ್ ನಿಲುಗಡೆಗೊಳ್ಳುತ್ತಿದ್ದ ಕಂಕನಾಡಿಯಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಕಾರ್ಯ ಆರಂಭಿಸಿರುವುದಕ್ಕೆ ಪಾಲಿಕೆಗೆ ನಾವು ಅಭಾರಿ ಯಾಗಿದ್ದೇವೆ. ಆದರೆ, ಈ ತಾತ್ಕಾಲಿಕ ಮಾರುಕಟ್ಟೆಗೆ ಪಂಚಾಂಗವೇ ಇಲ್ಲ. ಡಾಮಾರಿನ ಮೇಲೆಯೇ ಕಟ್ಟಡ ಕಟ್ಟಲಾಗುತ್ತಿದೆ. ಯಾವುದೇ ಕ್ಷಣದಲ್ಲಿ ಇದು ಉರುಳಿ ಬಿದ್ದರೆ ಅಪಾಯ ತಪ್ಪಿದ್ದಲ್ಲ. ನಾವು ಈಗಾಗಲೆ ಪಾಲಿಕೆಯ ಅಧಿಕಾರಿಗಳು ಮತ್ತು ಮಾಜಿ ಕಾರ್ಪೊರೇಟರ್ ನವೀನ್ ಡಿಸೋಜರ ಗಮನ ಸೆಳೆದಿದ್ದೇವೆ. ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಜರುಗಿಸುವ ವಿಶ್ವಾಸವಿದೆ’ ಎಂದಿದ್ದಾರೆ.

ಪ್ರಯಾಣಿಕರಿಗೆ ತೊಂದರೆ: ಕಳೆದ ಹಲವು ವರ್ಷದಿಂದ ಕಂಕನಾಡಿಯ ಈ ಮೈದಾನವನ್ನು ಖಾಸಗಿ ಸಿಟಿ ಮತ್ತು ಸರ್ವಿಸ್ ಬಸ್‌ಗಳು ತಂಗುದಾಣವನ್ನಾಗಿಸಿತ್ತು. ಇದೀಗ ಇಲ್ಲೇ ತಾತ್ಕಾಲಿಕವಾಗಿ ಮಾರುಕಟ್ಟೆ ನಿರ್ಮಿಸುತ್ತಿರುವುದರಿಂದ ಬಸ್‌ಗಳ ತಂಗುದಾಣಕ್ಕೆ ಅಡ್ಡಿಯಾಗಿದೆ. ಬೆರಳೆಣಿಕೆಯ ಬಸ್‌ಗಳನ್ನು ಹೊರತುಪಡಿಸಿದರೆ ಬಹುತೇಕ ಬಸ್‌ಗಳು ಇದೀಗ ಆಸುಪಾಸಿನ ಪೆಟ್ರೋಲ್ ಬಂಕ್ ಅಥವಾ ಸಂಚಾರ ದಟ್ಟಣೆ ಇಲ್ಲದ ರಸ್ತೆಯ ಬದಿ ನಿಲ್ಲುತ್ತಿವೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಪ್ರಯಾಣಿಕರಿಲ್ಲದೆ ಬಸ್‌ಗಳ ಸಂಪಾದನೆಗೂ ಹೊಡೆತ ಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News