ಮನೇಲ ಕ್ರಿಸ್ತರಾಜ ದೇವಾಲಯದ ಮೂರ್ತಿ ಹಾನಿಗೊಳಿಸಿದ ದುಷ್ಕರ್ಮಿಗಳು

Update: 2019-05-18 17:38 GMT

ಬಂಟ್ವಾಳ, ಮೇ 18: ಮನೇಲ ಕ್ರಿಸ್ತರಾಜ ದೇವಾಲಯಕ್ಕೆ ಸೇರಿದ ಕ್ರೈಸ್ತ ದೇವರ ಮೂರ್ತಿಯ ಗ್ರೋಟ್ಟೊವನ್ನು ದುಷ್ಕರ್ಮಿಗಳು ಹಾನಿಗೊಳಿಸಿದ ಘಟನೆ ವಿಟ್ಲ ಸಮೀಪದ ಪುಣಚ-ತೋರಣಕಟ್ಟೆ ಎಂಬಲ್ಲಿ ಶನಿವಾರ ನಡೆದಿದೆ.

ಇಲ್ಲಿನ ತೋರಣಕಟ್ಟೆ ರಸ್ತೆಯಲ್ಲಿರುವ ಮೂರ್ತಿಗೆ ದುಷ್ಕರ್ಮಿಗಳು ಕಲ್ಲೆಸೆದು ಹಾನಿ ಮಾಡಿದ್ದು, ಗ್ರೋಟ್ಟೊವಿನ ಹೊರಗಿನ ಗಾಜು ಪುಡಿಯಾಗಿದೆ. ಇಂದು ಬೆಳಿಗ್ಗೆ 5.45ಕ್ಕೆ ಮಹಿಳೆಯೊಬ್ಬರು ಪೂಜೆ ಸಲ್ಲಿಸಲು ಬಂದಾಗ ಯಾವುದೇ ಹಾನಿ ಆಗಿಲ್ಲ ಎನ್ನಲಾಗಿದೆ. ಬೆಳಿಗ್ಗೆ 10.30ಕ್ಕೆ ಈ ಕೃತ್ಯ ಬೆಳಕಿಗೆ ಬಂದಿದ್ದು, ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆಯಿಂದ ಗ್ರೋಟ್ಟೊಗೆ ಅಳವಡಿಸಲಾಗಿದ್ದ ಗಾಜು ಸಂಪೂರ್ಣವಾಗಿ ಪುಡಿಯಾಗಿದ್ದು, ಗ್ರೋಟ್ಟೊವಿನ ಕೆಳಭಾಗ ಬಿರುಕು ಬಿಟ್ಟಿದೆ. ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಧರ್ಮಗುರು ಪ್ರಕಾಶ್ ಡಿಸೋಜ ಅವರು ಪೊಲೀಸ್ ದೂರಿನಲ್ಲಿ ಒತ್ತಾಯಿಸಿದ್ದಾರೆ. ಈ ಸಂಬಂಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಹಾಗೂ ಬಂಟ್ವಾಳ ವೃತ್ತ ನಿರೀಕ್ಷಕ ಶರಣಗೌಡ, ವಿಟ್ಲ ಎಸ್ಸೈ ಯಲ್ಲಪ್ಪ ಅವರ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.

"ಈ ಚರ್ಚ್‍ನಲ್ಲಿ ಮತಾಂತರ ಮಾಡಲಾಗುತ್ತಿದೆ ಎನ್ನುವ ಬರವೊಂದನ್ನು ಈ ಭಾಗದ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದು, ಇದೇ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News