ನೌಕಾಪಡೆಯ ಮುಖ್ಯಸ್ಥರ ನೇಮಕ ಪ್ರಕರಣ: ಬಿಮಲ್ ವರ್ಮ ಅರ್ಜಿ ತಿರಸ್ಕರಿಸಿದ ರಕ್ಷಣಾ ಇಲಾಖೆ

Update: 2019-05-18 17:39 GMT

ಹೊಸದಿಲ್ಲಿ, ಮೇ 18: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರನ್ನಾಗಿ ವೈಸ್ ಅಡ್ಮಿರಲ್ ಕರಮ್‌ಬೀರ್ ಸಿಂಗ್‌ರನ್ನು ನೇಮಕಗೊಳಿಸಿರುವುದನ್ನು ಪ್ರಶ್ನಿಸಿ ವೈಸ್ ಅಡ್ಮಿರಲ್ ಬಿಮಲ್ ವರ್ಮ ಸಲ್ಲಿಸಿದ್ದ ಅರ್ಜಿಯನ್ನು ರಕ್ಷಣಾ ಇಲಾಖೆ ಶನಿವಾರ ತಿರಸ್ಕರಿಸಿದೆ.

  ಸೇವಾ ಜ್ಯೇಷ್ಠತೆಯನ್ನು ಕಡೆಗಣಿಸಿ ಈ ನೇಮಕ ಮಾಡಲಾಗಿದೆ. ಸೇವಾ ದಾಖಲೆಯಲ್ಲಿ ತಾನು ಅತ್ಯಂತ ಹಿರಿಯನಾಗಿದ್ದರೂ ನೌಕಾಪಡೆಯ ಮುಖ್ಯಸ್ಥ ಹುದ್ದೆಗೆ ತನಗಿಂತ ಕಿರಿಯನಾಗಿರುವ ಸಿಂಗ್‌ರನ್ನು ಸರಕಾರ ನೇಮಿಸಿರುವುದನ್ನು ಪ್ರಶ್ನಿಸಿ ವರ್ಮ ಎಪ್ರಿಲ್ 10ರಂದು ಶಾಸನಬದ್ಧ ದೂರು ಸಲ್ಲಿಸಿದ್ದರು.

ಇದನ್ನು ತಳ್ಳಿಹಾಕಿರುವ ರಕ್ಷಣಾ ಇಲಾಖೆಯ ಜಂಟಿ ಕಾರ್ಯದರ್ಶಿ(ನೌಕಾಪಡೆ) ರಿಚಾ ಮಿಶ್ರಾ, ಸೇನಾಪಡೆಗಳ ಮುಖ್ಯಸ್ಥರನ್ನು ನೇಮಕ ಮಾಡುವಾಗ ಸೇವಾ ಹಿರಿತನ ಪ್ರಮುಖ ಮಾನದಂಡವಾಗಿದ್ದರೂ ಇದು ಏಕೈಕ ಮಾನದಂಡವಲ್ಲ. ಈ ಹಿಂದೆ ಕೂಡಾ ಇದೇ ರೀತಿ ಮಾಡಲಾಗಿದೆ ಎಂದು ವಿವರಣೆ ನೀಡಿದ್ದಾರೆ.

 ಎಪ್ರಿಲ್ 10ರಂದು ಸಲ್ಲಿಸಲಾಗಿರುವ ಶಾಸನಬದ್ಧ ದೂರಿನಲ್ಲಿ ತಿಳಿಸಿರುವ ವಿಷಯವನ್ನು ಕೇಂದ್ರ ಸರಕಾರ ಎಚ್ಚರಿಕೆಯಿಂದ ಪರಿಶೀಲಿಸಿದ ಬಳಿಕ ಈ ಅರ್ಜಿಗೆ ಮಹತ್ವವಿಲ್ಲದ ಕಾರಣ ಇದನ್ನು ತಿರಸ್ಕರಿಸಲು ನಿರ್ಧರಿಸಲಾಗಿದೆ. ನೌಕಾಪಡೆಯ ಮುಖ್ಯಸ್ಥರ ನೇಮಕದ ವಿಷಯದಲ್ಲಿ ಸರಕಾರ ಹಾಲಿ ನಿಯಮವನ್ನು ಎಲ್ಲಾ ಅಧಿಕಾರಿಗಳಿಗೆ ಅನ್ವಯಿಸಿದೆ. ಅಲ್ಲದೆ ಅತ್ಯಂತ ಹಿರಿಯ, ಅರ್ಹ ಅಧಿಕಾರಿ ವರ್ಮರನ್ನೂ ನೇಮಕ ಪ್ರಕ್ರಿಯೆಗೆ ಪರಿಗಣಿಸಿದ್ದು ಅವರು ನೌಕಾಪಡೆಯ ಮುಖ್ಯಸ್ಥರ ಹುದ್ದೆಯ ನೇಮಕಸೂತ್ರಕ್ಕೆ ಸೂಕ್ತವಲ್ಲ ಎಂದು ತಿಳಿದುಬಂದಿದೆ .

    ಅಲ್ಲದೆ ಈ ಆಯ್ಕೆಗೆ ಯಾವುದೇ ಅಪ್ರಸ್ತುತ ಕಾರಣಗಳಿಲ್ಲ ಎಂಬುದನ್ನು ಇಲಾಖೆ ದೃಢಪಡಿಸಿಕೊಂಡಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ತನ್ನನ್ನು ನೌಕಾಪಡೆಯ ಮುಖ್ಯಸ್ಥರ ಹುದ್ದೆಗೆ ಆಯ್ಕೆ ಮಾಡದಿರುವುದನ್ನು ಪ್ರಶ್ನಿಸಿ ವೈಸ್ ಅಡ್ಮಿರಲ್ ವರ್ಮ ಸಶಸ್ತ್ರ ಪಡೆಗಳ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News