​ದಲಿತ ಮಹಿಳೆಯ ಮನೆ ಪುನರ್ ನಿರ್ಮಿಸಿಕೊಡಲು ಪಿಯುಸಿಎಲ್ ಆಗ್ರಹ

Update: 2019-05-18 17:42 GMT

ಮಂಗಳೂರು, ಮೇ 18: ಇಲ್ಲಿನ ಸುರತ್ಕಲ್ ಗ್ರಾಮದ ಸರಕಾರಿ ಜಮೀನಿನಲ್ಲಿ ವಾಸವಾಗಿರುವ ಪರಿಶಿಷ್ಟಜಾತಿಯ ಶ್ರೀಮತಿ ಕಾವೇರಿಯವರ ಮನೆಯಿಂದ ಹೊರಹಾಕಿಸಿ ಮನೆಗೆ ಬೀಗ ಹಾಕಿಸಿರುವ ಬಗ್ಗೆ ತಹಶೀಲ್ದಾರ್ ನೊಟೀಸು ಜಾರಿ ಮಾಡಿದ್ದರೂ ಗೀತಾ ಹೆಗ್ಡೆಯವರು ಆ ಭೂಮಿ ತನಗೆ ಸೇರಿದೆ ಈ ಬಗ್ಗೆ ನ್ಯಾಯಾಲಯದ ಆದೇಶವಿದೆ ಎಂದು ಹೇಳಿ ತಾವು ಕರೆದು ತಂದ 20 ಮಂದಿಗಳ ಸಹಕಾರದೊಂದಿಗೆ ಮೇ 10ರಂದು ಕಾವೇರಿಯವರ ಮನೆಯನ್ನು ಕೆಡಹುವ ಮೂಲಕ ದಲಿತ ಮಹಿಳೆ ಹಾಗೂ ಆಕೆಯ ಕುಟುಂಬದ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಪಿಯುಸಿಎಲ್ ದ.ಕ ಜಿಲ್ಲಾಧ್ಯಕ್ಷ ಆರ್. ಈಶ್ವರ್ ರಾಜ್ ಮತ್ತು ದಸಂಸ ಮುಖಂಡ ಎಸ್.ಪಿ. ಆನಂದ ಸುದ್ದಿಗೋಷ್ಠಿಯಲ್ಲಿಂದು ಆರೋಪಿಸಿದ್ದಾರೆ.

ಸದ್ರಿ ಪ್ರಕರಣದಲ್ಲಿ ದಲಿತ ಮಹಿಳೆ ಕಾವೇರಿ ಹಾಗೂ ಅವರ ಮಕ್ಕಳು ಬೀದಿ ಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ದಲಿತ ಮಹಿಳೆ ಕಾವೇರಿಯ ಮನೆಯನ್ನು ಕೆಡವಲು ನ್ಯಾಯಾಲಯ ಆದೇಶ ಮಾಡಿರುವುದಿಲ್ಲ. ಕಾನೂನು ಬಾಹಿರವಾಗಿ ಮನೆ ಕೆಡವಿದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮೇ 10ರಂದು ಗೀತಾ ಹೆಗ್ಡೆಯವರ ವಿರುದ್ಧ ಪ್ರಕರಣ ದಾಖಲಾಗಿದೆ. ಆಯುಕ್ತರ ಆದೇಶದ ಮೇರೆಗೆ ಡಿಸಿಪಿ ಆ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಆದರೆ ಬಳಿಕವೂ ಮಹಿಳೆಗೆ ಈ ಬಗ್ಗೆ ಯಾವೂದೇ ರೀತಿಯಲ್ಲಿ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಮೇ 15ರಂದು ಪೊಲೀಸ್ ಆಯುಕ್ತರಿಗೆ ಜಿಲ್ಲಾಧಿಕಾರಿ ಮೂಲಕ ದೂರು ನೀಡಲಾಗಿದೆ. ದಲಿತ ಮಹಿಳೆ ಕಾವೇರಿಗೆ ಅವರ ವಾಸವಾಗಿದ್ದ ಭೂಮಿ ಹಾಗೂ ವಾಸದ ಮನೆಯನ್ನು ಕಾನೂನು ಬದ್ಧವಾಗಿ ಹಿಂದಿರುಗಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಯ ಮೂಲಕ ಪಿಯುಸಿಎಲ್ ಅಧ್ಯಕ್ಷ ಈಶ್ವರ್ ರಾಜ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾವೇರಿಯ ಮಕ್ಕಳಾದ ವಾರಿಜ, ಪದ್ಮಾವತಿ ದ.ಸಂ.ಸಮಿತಿಯ ಮುಖಂಡರಾದ ಎಸ್.ಪಿ.ಆನಂದ, ಯಶೋಧ, ಪಿಯುಸಿಎಲ್ ರಾಷ್ಟ್ರೀಯ ಮಾಜಿ ಉಪಾಧ್ಯಕ್ಷ ಪಿ.ಬಿ.ಡೇಸಾ, ಪಿಯುಸಿಎಲ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್ ಡಿಸಿಲ್ವ, ಸದಸ್ಯ ರಮೇಶ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News