ಗ್ರಾಪಂಗಳಿಗೆ ಉಪಚುನಾವಣೆ: ಮೇ 27ರೊಳಗೆ ಶಸ್ತ್ರಾಸ್ತ್ರ ಠೇವಣಿಗೆ ಡಿಸಿ ಸೂಚನೆ

Update: 2019-05-18 17:45 GMT

ಮಂಗಳೂರು, ಮೇ 18: ದ.ಕ. ಜಿಲ್ಲೆಯಲ್ಲಿ ಗ್ರಾಪಂಗಳಿಗೆ 2019ರ ಸಾಲಿನ ಉಪ ಚುನಾವಣೆಗಳು ನಡೆಯಲಿದ್ದು, ಪೊಲೀಸ್ ಆಯುಕ್ತರ ಕಾರ್ಯ ವ್ಯಾಪ್ತಿ ಹೊರತುಪಡಿಸಿ, ಚುನಾವಣೆ ನಡೆಯುವ ಗ್ರಾಪಂಗೆ ಸಂಬಂಧಪಟ್ಟಂತೆ ಆಯುಧ ಪರವಾನಿಗೆ ಹೊಂದಿರುವವರು ಶಸ್ತ್ರಾಸ್ತ್ರಗಳನ್ನು ಮೇ 27ರೊಳಗೆ ಠೇವಣಿ ಇರಿಸಲು ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.

ಪುತ್ತೂರು (1-ಕಬಕ ಮತ್ತು 5- 34 ನೆಕ್ಕಿಲಾಡಿ) ಮತ್ತು ಬೆಳ್ತಂಗಡಿ (28 ಉಜಿರೆ ಮತ್ತು 29 ಕೊಯ್ಯೂರು) ಗ್ರಾಮ ಪಂಚಾಯತ್‌ಗಳಿಗೆ ಸಂಬಂಧ ಪಟ್ಟಂತೆ ಆಯುಧ ಪರವಾನಿಗೆ ಹೊಂದಿರುವವರು ಎಲ್ಲ ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಬೇಕು. ಜಿಲ್ಲೆಯ ಪ್ರಸಕ್ತ ಕಾನೂನು ಸುವ್ಯವಸ್ಥೆ ಸಾರ್ವಜನಿಕ ಶಾಂತಿ ಸುರಕ್ಷತೆಯ ಹಿತದೃಷ್ಟಿಯಿಂದ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಆತ್ಮರಕ್ಷಣೆಗಾಗಿ, ಕೃಷಿ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿರುವವರು ಆಯುಧಗಳನ್ನು ತಕ್ಷಣ ಹತ್ತಿರದ ಪೊಲೀಸ್ ಠಾಣೆ ಅಥವಾ ನಮೂನೆ ನಂಬರ್ 8ರ ಪರವಾನಿಗೆ ಹೊಂದಿರುವ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಿಗಳಲ್ಲಿ ಠೇವಣಿ ಇಡಬೇಕು ಎಂದರು.

ಚುನಾವಣಾ ಫಲಿತಾಂಶ ಘೋಷಣೆಯಾದ ದಿನಾಂಕದಿಂದ ಒಂದು ವಾರದ ನಂತರ ಠೇವಣಿ ಇಡಲಾದ ಪೊಲೀಸ್ ಠಾಣೆ/ ಅಧಿಕೃತ ಕೋವಿ ಮತ್ತು ಮದ್ದುಗುಂಡು ಡೀಲರ್‌ಗಳಿಂದ ಪರವಾನಿಗೆದಾರರು ಶಸ್ತ್ರಾಸ್ತ್ರಗಳನ್ನು ಮರುಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News