ಕಾಸರಗೋಡು, ಕಣ್ಣೂರಿನ 7 ಮತಗಟ್ಟೆಗಳಲ್ಲಿ ಬಿರುಸಿನ ಮರುಮತದಾನ

Update: 2019-05-19 05:17 GMT

ಕಾಸರಗೋಡು, ಮೇ 19: ನಕಲಿ ಮತದಾನ ನಡೆದ ಕಾಸರಗೋಡಿನ ನಾಲ್ಕು ಮತ್ತು ಕಣ್ಣೂರು ಲೋಕಸಭಾ ಕ್ಷೇತ್ರದ ಮೂರು ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ನಡುವೆ ಮರು ಮತದಾನ ನಡೆಯುತ್ತಿದ್ದು, ಮೊದಲ ಗಂಟೆಗಳಲ್ಲಿ ಉತ್ತಮ ಮತದಾನ ನಡೆದಿದೆ. ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.

ದೃಶ್ಯಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗುತ್ತಿದ್ದು, ಗುರುತು ಚೀಟಿ ಕಡ್ಡಾಯಗೊಳಿಸಲಾಗಿದ್ದು, ತಪಾಸಣೆ ಬಳಿಕವಷ್ಟೇ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಪರ್ದಾ ಧರಿಸಿ ಬರುವ ಮಹಿಳೆಯರ ಗುರುತು ಪತ್ತೆ ಹಚ್ಚಿದ ಬಳಿಕವೇ ಮತಗಟ್ಟೆಗೆ ಪ್ರವೇಶ ನೀಡಲಾಗುತ್ತಿದೆ. ಇದಕ್ಕಾಗಿ ಆಯಾ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಗಿದೆ. 

ಪಿಲಾತ್ತರದ ಮತಗಟ್ಟೆಯಲ್ಲಿ ಸಿಪಿಎಂ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಮಧ್ಯಪ್ರವೇಶಿಸಿ ತಿಳಿಗೊಳಿಸಿದರು.

ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರದ  ಕಯ್ಯೂರ್  ಚೀಮೇನಿ  ಗ್ರಾಮಪಂಚಾಯತ್ ನ ಕುಳಿಯಾಡ್  ಜಿಯುಪಿ ಶಾಲಾ 48ನೇ ಮತಗಟ್ಟೆ, ಪಿಲಾತ್ತರ 19ನೇ ಮತಗಟ್ಟೆ, ಪುಡಿಯಂಗಡಿ ಜುಮಾಅತ್ ಎಚ್.ಎಸ್.ನಾರ್ತ್ ಬ್ಲಾಕ್ ನ 69ನೇ ಮತಗಟ್ಟೆ, ಜುಮಾಅತ್ ಎಚ್.ಎಸ್. ಸೌತ್ ಬ್ಲಾಕ್ ನ 70ನೇ ಮತಗಟ್ಟೆ ಹಾಗೂ ಕಣ್ಣೂರು ಲೋಕಸಭಾ ಕ್ಷೇತ್ರದ ತಳಿಪರಂಬ ವಿಧಾನಸಭಾ ಕ್ಷೇತ್ರದ ಪಾಂಬುರುತ್ತಿ ಮಾಪಿಳ್ಳ ಎಯುಪಿ ಶಾಲೆಯ 166 ಮತಗಟ್ಟೆ, ಧರ್ಮಡಂ ವಿಧಾನಸಭಾ ಕ್ಷೇತ್ರದ 52ನೇ ಮತಗಟ್ಟೆ ಮತ್ತು ವೇಗಾಂಡ್  ಯು.ಪಿ. ಶಾಲೆಯ 53ನೇ ನಂಬ್ರದ ಮತಗಟ್ಟೆಗಳಲ್ಲಿ ಮರುಮತದಾನ ನಡೆಯುತ್ತಿದೆ.

ಚುನಾವಣಾ ಕರ್ತವ್ಯಕ್ಕೆ ಕಂದಾಯ ಇಲಾಖಾ ನೌಕರರನ್ನು ಮಾತ್ರ ನೇಮಿಸಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ತಹಶೀಲ್ದಾರ್ ರ್ಯಾಂಕ್ ಹೊಂದಿರುವ ಮತದಾರರು ಮತಗಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೀಡಿಯೋ ಚಿತ್ರೀಕರಣವನ್ನು ಮತಗಟ್ಟೆಗಳಲ್ಲಿ ಕಲ್ಪಿಸಲಾಗಿದೆ.

ಬೆಳಗ್ಗೆಯಿಂದಲೇ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ಸರದಿ ಸಾಲು ಕಂಡುಬಂದಿತ್ತು. ಮಾಧ್ಯಮಗಳಿಗೆ ಚಿತ್ರೀಕರಣಕ್ಕೆ ನಿರ್ಬಂಧ ಹೇರಲಾಗಿದೆ. ಬಿಗಿ ಬಂದೋಬಸ್ತ್  ನಲ್ಲಿ ಚುನಾವಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News