ಉಳ್ಳಾಲದಲ್ಲಿ ನೀರಿನ ದಾಹ ನೀಗಿಸುತ್ತಿರುವ ಹಾಜಿ ಅಬ್ದುರ್ರವೂಫ್ ಮುಸ್ಲಿಯಾರ್

Update: 2019-05-19 08:43 GMT

ಉಳ್ಳಾಲ, ಮೇ 19: ಎಲ್ಲೆಡೆಯೂ ನೀರಿನ ಹಾಹಕಾರವೇ ಕೇಳಿಬರುತ್ತಿದ್ದು, ದ.ಕ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಉಳ್ಳಾಲ ಪರಿಸರದಲ್ಲೂ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಇಂತಹ ಜಲಕ್ಷಾಮದ ನಡುವೆ ಕುಡಿಯುವ ನೀರಿಗಾಗಿ ಯಾರೂ ಪರಿತಪಿಸಬಾರದು ಉದ್ದೇಶದಿಂದ ಉಳ್ಳಾಲದ ಹಾಜಿ ಅಬ್ದುರ್ರವೂಫ್ ಮುಸ್ಲಿಯಾರ್ ತಮ್ಮ ಕೊಳವೆಬಾವಿಯಿಂದ ಕಳೆದ ಹಲವು ವಷಗಳಿಂದ ಇಡೀ ಊರಿಗೇ ಉಚಿತವಾಗಿ ನೀರು ನೀಡುವ ಮೂಲಕ ಜಲದಾಹವನ್ನು ನೀಗಿಸುವ ಮಾದರಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಉಳ್ಳಾಲ ಸೈಯದ್ ಮದನಿ ದರ್ಗಾದ ಬಳಿಯೇ ಹಾಜಿ ಅಬ್ದುರ್ರವೂಫ್ ಮುಸ್ಲಿಯಾರ್ ಅವರ ಮನೆಯಿದೆ. ಇವರ ಮನೆಯ ಪರಿಸರದೆಲ್ಲೆಡೆ ನೀರಿನ ಅಭಾವ ತೀವ್ರವಾಗಿ ಕಾಡುತ್ತಿದೆ. ಆದರೆ ಕೆಲವು ವರ್ಷಗಳ ಹಿಂದೆ ರವೂಫ್ ಮುಸ್ಲಿಯಾರ್ ಕೊರೆಸಿದ ಕೊಳವೆಬಾವಿಯಲ್ಲಿ ಯಥೇಚ್ಚವಾಗಿ ನೀರಿದೆ. ದೇವರ ದಯೆದಿಂದಲೇ ನೀರು ಸಿಕ್ಕಿದೆ ಎನ್ನುತ್ತಾರೆ 70ರ ಹರೆಯದ ಅಬ್ದುರ್ರವೂಫ್ ಮುಸ್ಲಿಯಾರ್.

ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಉಳ್ಳಾಲ ಪರಿಸರದಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ. ಅದರಲ್ಲೂ ಈ ಬಾರಿ ಮಾರ್ಚ್ ನಂತರವೇ ಉಳ್ಳಾಲದಲ್ಲಿ ನೀರಿನ ಬವಣೆ ಆರಂಭಗೊಂಡಿದೆ. ಜನರ ಸಂಕಷ್ಟವನ್ನು ಅರಿತ ರವೂಫ್ ಮುಸ್ಲಿಯಾರ್ ನೀರು ಕೇಳಿದವರಿಗೆ ಇಲ್ಲ ಎನ್ನದೆ ಉಚಿತವಾಗಿ ನೀಡುವ ಕಾಯಕದೊಂದಿಗೆ ಮುನ್ನಡೆಯುತ್ತಿದ್ದಾರೆ. ಸಾಮಾನ್ಯವಾಗಿ ಕುಡಿಯುವ ನೀರು ಸಾಕಷ್ಟಿದ್ದವರು ಒಂದು ಸಣ್ಣ ಟ್ಯಾಂಕರ್ ತುಂಬಾ ನೀರಿಗೆ ಕನಿಷ್ಠವೆಂದರೂ 50 ರೂ. ದರ ನಿಗದಿ ಮಾಡಿರುತ್ತಾರೆ. ಟ್ಯಾಂಕರ್‌ನವರು ಇದನ್ನು 300 ರೂ.ಗಿಂತಲೂ ಅಧಿಕ ದರಕ್ಕೆ ಮಾರಾಟ ಮಾಡುತ್ತಾರೆ. ಆದರೆ ರವೂಫ್ ಮುಸ್ಲಿಯಾರ್ ಕುಡಿಯವ ನೀರನ್ನು ವ್ಯವಹಾರವನ್ನಾಗಿ ನೋಡದೆ ‘ನೀರು ದೇವರ ಸೊತ್ತು, ಅದರಲ್ಲಿ ಎಲ್ಲರ ಪಾಲೂ ಇದೆ’ ಎನ್ನುವ ನಂಬಿಕೆಯೊಂದಿಗೆ ಎಲ್ಲರಿಗೂ ಉಚಿತವಾಗಿಯೇ ನೀರು ನೀಡುವ ಮೂಲಕ ಮಾದರಿಯಾಗಿದ್ದಾರೆ. ಆ ಮೂಲಕ ಹಾಜಿ ಅಬ್ದುರ್ರವೂಫ್ ಮುಸ್ಲಿಯಾರ್ ‘ನೀರಿನ ಸಾಬ್’ ಆಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ.

ದಿನಕ್ಕೆ 150ಕ್ಕೂ ಅಧಿಕ ಟ್ಯಾಂಕರ್ ನೀರು ಸರಬರಾಜು: ಅಬ್ದುರ್ರವೂಫ್ ಮುಸ್ಲಿಯಾರ್ ಅವರ ಮನೆಯ ಕೊಳವೆಬಾವಿಯಿಂದ ಬೆಳಗ್ಗೆ 5ರಿಂದ ತಡರಾತ್ರಿ 2 ಗಂಟೆಯವರೆಗೂ ನೀರಿನ ಟ್ಯಾಂಕರ್‌ನವರು ಬಂದು ನೀರು ತುಂಬಿಸಿಕೊಂಡು ಹೋಗುತ್ತಾರೆ. ದಿನಕ್ಕೆ ಸುಮಾರು 150ಕ್ಕೂ ಹೆಚ್ಚು ಟ್ಯಾಂಕರ್ ನೀರು ಇಲ್ಲಿಂದ ಸರಬರಾಜಾಗುತ್ತಿದೆ. ಈ ಸಂದರ್ಭ ಒಂದು ವೇಳೆ ವಿದ್ಯುತ್ ಕೈಕೊಟ್ಟರೆ ಜನರೇಟರ್ ಮೂಲಕ ನೀರು ಸರಬರಾಜಿಗೆ ರವೂಫ್ ಹಾಜಿ ಸಹಕರಿಸುತ್ತಾರೆ. ಖಾಸಗಿ ಟ್ಯಾಂಕರ್ ಅಲ್ಲದೆ ಉಳ್ಳಾಲ ನಗರಸಭೆಯವರು ಕೂಡಾ ಇಲ್ಲಿಂದ ನೀರು ಸಾಗಿಸುತ್ತಾರೆ. ಈ ಬೇಸಿಗೆ ಕಾಲದಲ್ಲಿ ಬೆಳಗ್ಗಿನಿಂದ ರಾತ್ರಿ ತನಕ ಬೋರ್‌ವೆಲ್ ಮೋಟಾರ್ ಚಾಲನೆಯಲ್ಲಿರುತ್ತದೆ. ಇದಕ್ಕೆ ತಗಲುವ ವಿದ್ಯುತ್ ಬಿಲ್ಲನ್ನು ಕೂಡಾ ರವೂಫ್ ಹಾಜಿಯವರೇ ಪಾವತಿಸುತ್ತಾರೆ.

ಹಾಜಿ ಅಬ್ದುರ್ರವೂಫ್ ಮುಸ್ಲಿಯಾರ್ ಅವರು ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬರಾಗಿ ನಲವತ್ತೈದು ವರ್ಷಗಳಿಗೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿ ಈಗ ನಿವೃತ್ತರಾಗಿದ್ದರೂ ಸಹಾಯಕ ಖಾಝಿಯಾಗಿ ಸೇವೆ ನಿರತರಾಗಿದ್ದಾರೆ. ಇವರ ತಂದೆ ಯೂಸುಫ್ ಮುಸ್ಲಿಯಾರ್ ಕೂಡಾ ಉಳ್ಳಾಲ ಜಮಾಅತ್ ಖತೀಬರಾಗಿ ಸೇವೆ ಸಲ್ಲಿಸಿ ಜನಾನುರಾಗಿದ್ದರು. ಧಾರ್ಮಿಕ ಸೇವೆಯೊಂದಿಗೆ ಸಾಮಾಜಿಕ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು, ಊರಿನ ಜಲಕ್ಷಾಮ ನೀಗಿಸುವಲ್ಲಿ ತಮ್ಮಿಂದಾದ ಕೊಡುಗೆಯನ್ನು ಪ್ರಾಮಾಣಿಕ ಪ್ರಯತ್ನದೊಂದಿಗೆ ಮಾಡುತ್ತಿದ್ದಾರೆ.


ನೀರು ದೇವರ ಸೊತ್ತು. ಅದು ಎಲ್ಲರಿಗೂ ಸಿಗಬೇಕು. ನಾನು ಯಾವುದೇ ಫಲಾಪೇಕ್ಷೆ ಇಲ್ಲದೆ ನೀರು ನೀಡುತ್ತಿದ್ದು, ಈ ಸಣ್ಣ ಸೇವೆಯಿಂದ ನನ್ನ ಹಿರಿಯರಿಗೆ, ಪೂರ್ವಜರಿಗೆ ಸಂತೃಪ್ತಿಯಾಗಬಹುದು. ಸಾರ್ವಜನಿಕರಿಗಾಗಿ ಉಚಿತ ನೀರನ್ನು ಸಮಯ, ಜಾತಿ ಧರ್ಮಗಳ ಭೇದವಿಲ್ಲದೆ ನೀಡುತ್ತಿದ್ದೇನೆ. ಅಲ್ಲಾಹು ನನ್ನ ಸೇವೆಯನ್ನು ಸ್ವೀಕರಿಸಿದರೆ ನನಗದೇ ದೊಡ್ಡ ಪಾರಿತೋಷಕ.
-ಹಾಜಿ ಅಬ್ದುರ್ರವೂಫ್ ಮುಸ್ಲಿಯಾರ್


ಝಂಝಂ ನೀರಿನ ಪ್ರಭಾವ!
ಬೋರ್‌ವೆಲ್‌ನಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೀರಿರುವುದರ ಹಿಂದೆ ಝಂಝಂ ನೀರಿನ ಪ್ರಭಾವ ಇದೆ ಎಂಬ ವಿಶ್ವಾಸವನ್ನು ಅಬ್ದುರ್ರವೂಫ್ ಮುಸ್ಲಿಯಾರ್ ಹೊಂದಿದ್ದಾರೆ. ಈ ಬಗ್ಗೆ ವಿವರಿಸುವ ಅವರು, ‘‘ಹಜ್‌ನಿಂದ ಬರುವಾಗ ನಾನು ತಂದಿದ್ದ ಪವಿತ್ರ ಝಂಝಂ ನೀರನ್ನು ಕೊಳವೆಬಾವಿಯೊಳಗೆ ಸುರಿದಿದ್ದೇನೆ. ಕುಟುಂಬಸ್ಥರು, ಆಪ್ತರು ಪ್ರತೀ ವರ್ಷ ನನಗೆ ನೀಡುವ ಝಂಝಂ ನೀರನ್ನು ಈ ಬೋರ್‌ಗೆ ಸುರಿಯುತ್ತಲೇ ಬಂದಿದ್ದೇನೆ. ಮಿಲ್ಲತ್ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಕಾಡುತ್ತಿದ್ದ ಪ್ರಸಕ್ತ ದಿನಗಳಲ್ಲಿ ನಮ್ಮ ಮನೆಯಂಗಳದ ಈ ಕೊಳವೆಬಾವಿಯಿಂದ ದಿನದ 18 ತಾಸಿಗೂ ಹೆಚ್ಚು ಕಾಲ ಜನರ ಬೇಡಿಕೆಯ ನೀರನ್ನು ಪೂರೈಸಿಯೂ ಜಲ ಸಮೃದ್ಧವಾಗಿದೆ. ಇದರ ಹಿಂದೆ ಝಂಝಂ ನೀರಿನ ಪ್ರಭಾವ ಅಡಗಿದೆ’’ ಎನ್ನುತ್ತಾರೆ.


ಕಳೆದ ಮೂರು ವರ್ಷಗಳಿಂದ ಅಬ್ದುರ್ರವೂಫ್ ಮುಸ್ಲಿಯಾರ್ ಯಾವುದೇ ಫಲಾಪೇಕ್ಷೆ ಇಲ್ಲದೆ ತಮ್ಮ ಕೊಳವೆಬಾವಿಯಿಂದ ಉಚಿತವಾಗಿ ಕುಡಿಯುವ ನೀರನ್ನು ಉಳ್ಳಾಲ ಹಾಗೂ ಆಸುಪಾಸಿನ ಪ್ರದೇಶಗಳಿಗೆ ನೀಡುವುದರೊಂದಿಗೆ ಈ ಭಾಗದ ಜಲದಾಹವನ್ನು ನೀಗಿಸಿದ ಶ್ರೇಷ್ಠ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. -ಫಾರೂಕ್ ಉಳ್ಳಾಲ್
ದ.ಕ. ಜಿಲ್ಲಾ ಕಾಂಗ್ರೆಸ್ ವಕ್ತಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News