ಯುನಿಟಿ ಮಾರ್ಚ್ ಗೆ ಅನುಮತಿಸಿ ಮದ್ರಾಸ್ ಹೈಕೋರ್ಟ್ ತೀರ್ಪು: ಪಾಪ್ಯುಲರ್ ಫ್ರಂಟ್ ಸ್ವಾಗತ

Update: 2019-05-19 09:34 GMT

ಹೊಸದಿಲ್ಲಿ, ಮೇ 19: ಫೆಬ್ರವರಿ 17ರ ಪಾಪ್ಯುಲರ್ ಫ್ರಂಟ್ ದಿನದಂದು ಯುನಿಟಿ ಮಾರ್ಚ್‌ (ಕಾರ್ಯಕರ್ತರ ಪಥ ಸಂಚಲನ) ನಡೆಸಲು ಅನುಮತಿ ನಿರಾಕರಿಸಿದ ಪೊಲೀಸ್ ಇಲಾಖೆಯ ಆದೇಶವನ್ನು ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠ ವಜಾಗೊಳಿಸಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಲವು ವರ್ಷ ಗಳಿಂದ ಫೆಬ್ರವರಿ 17ರಂದು ತನ್ನ ಸ್ಥಾಪನಾ ದಿನಾಚರಣೆಯನ್ನು ಆಚರಿಸುತ್ತಿದೆ.  ಈ ಪ್ರಯುಕ್ತ ದಕ್ಷಿಣದ ಮೂರು ರಾಜ್ಯಗಳಲ್ಲಿ ತನ್ನ ಕಾರ್ಯಕರ್ತರ ಪಥ ಸಂಚಲನವನ್ನು ಯುನಿಟಿ ಮಾರ್ಚ್ ಹೆಸರಿನಿಂದ  ನಡೆಸಲಾಗುತ್ತದೆ. ದ್ವೇಷ ರಾಜಕಾರಣವನ್ನು ಸೋಲಿಸಿ' ಎಂಬುದು 2019ರ ಯುನಿಟಿ ಮಾರ್ಚ್‌ ನ ಘೋಷ ವಾಕ್ಯವಾಗಿತ್ತು.

ಕರ್ನಾಟಕ ಮತ್ತು ಕೇರಳದ ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದರೂ ತಮಿಳುನಾಡು ಪೊಲೀಸರು ಕೊನೆಯ ಹಂತದಲ್ಲಿ ಅನುಮತಿ ನಿರಾಕರಿಸಿದ್ದರು. ಪೊಲೀಸ್ ಇಲಾಖೆಯ ಈ ನಿರ್ಬಂಧವನ್ನು ಕಾನೂನುಬಾಹಿರವೆಂದು ರದ್ದುಗೊಳಿಸುವ ಮೂಲಕ ಸಂಘಟನೆಯು ಯುನಿಟಿ ಮಾರ್ಚ್ ಮತ್ತು ಸಾರ್ವಜನಿಕ ಸಭೆ ನಡೆಸಲು ಅನುಮತಿ ನೀಡುವಂತೆ ಕೋರಿ ಪಾಪ್ಯುಲರ್ ಫ್ರಂಟ್  ಜಿಲ್ಲಾಧ್ಯಕ್ಷ ಜೆ.ಮುಹಮ್ಮದ್ ಅಲಿ ಹೈಕೋರ್ಟ್ ಮಧುರೈ ಪೀಠದ ಮುಂದೆ ರಿಟ್ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಟಿ.ಲಜಪತಿ, ವಕೀಲರಾದ ಎನ್.ಎಂ.ಶಾಜಹಾನ್, ಎಸ್.ಎ.ಎಸ್.ಅಲಾವುದ್ದೀನ್ ಮತ್ತು ಎಂ.ಎಂ. ಅಬ್ಬಾಸ್ ನ್ಯಾಯಾಲಯದಲ್ಲಿ ವಾದಿಸಿದ್ದರು.

"ಪ್ರತಿವಾದಿಗಳ ಪರವಾಗಿ ವಾದಿಸಿದ ಸರಕಾರಿ ವಕೀಲರು ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ಯಾವುದೇ ಮಾನ್ಯತೆಯನ್ನು ನ್ಯಾಯಾಲಯ ಕಾಣುವುದಿಲ್ಲ" ಎಂದು ಮಾನ್ಯ ಹೈಕೋರ್ಟ್ ಹೇಳಿದೆ.

ನಮ್ಮಂತಹ ಸ್ವತಂತ್ರ ದೇಶದಲ್ಲಿ ಅರ್ಹ ಮಿತಿಗಳೊಂದಿಗೆ ಮಾತನಾಡುವ ಸ್ವಾತಂತ್ರ್ಯ ವನ್ನು ಕಾಪಾಡುವುದು ಅಗತ್ಯ. ಅಗತ್ಯವಾಗಿ ಪ್ರತಿವಾದಿಗಳು ಅನುಮತಿಯನ್ನು ನೀಡಬೇಕಾಗಿತ್ತು. ಹಾಗಾಗಿ ನಿರ್ಬಂಧ ಆದೇಶವನ್ನು ರದ್ದುಗೊಳಿಸಲಾಗುವುದು ಎಂದು ಮಧುರೈ ಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.

ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿದ ಪಾಪ್ಯುಲರ್ ಫ್ರಂಟ್ ಪ್ರಧಾನ ಕಾರ್ಯದರ್ಶಿ  ಮುಹಮ್ಮದ್ ಅಲಿ ಜಿನ್ನಾ, "ಭಾರತೀಯ ಸಂವಿಧಾನ ಖಾತರಿ ಪಡಿಸುವ  ಸಂಘಟಿತರಾಗುವ, ಮಾತನಾಡುವ ಮತ್ತು ಅಭಿವ್ಯಕ್ತಿ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿದೆ. ತಮ್ಮ ರಾಜಕೀಯ ಗುರುಗಳ ಒತ್ತಡಕ್ಕೆ ಮಣಿದು ಅಲ್ಪಸಂಖ್ಯಾತ ಸಂಘಟನೆಗಳ ಕಾರ್ಯಕ್ರಮಗಳನ್ನು ತಡೆಯಲು ಪ್ರಯತ್ನಿಸುವ ರಾಜ್ಯ ಪೊಲೀಸರಿಗೆ  ಛಾಟಿಯೇಟು ಬೀಸಿದೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News