ಉಡುಪಿ ಶ್ರೀಕೃಷ್ಣಮಠ ಕೋಮುವಾದದ ಕೇಂದ್ರ: ಅಮೀನ್ ಮಟ್ಟು

Update: 2019-05-19 12:27 GMT

ಮಂಗಳೂರು, ಮೇ 19: ಪೇಜಾವರ ಶ್ರೀಗಳಂತಹ ಕ್ರಾಂತಿಕಾರಿಗಳು ಯಾರೂ ಇಲ್ಲ. ಇಂದಿಗೂ ಪೇಜಾವರ ಶ್ರೀಗಳು ರಾಮಮಂದಿರ ನಿರ್ಮಾಣದ ಬಗ್ಗೆ ಹೇಳಿಕೆಗಳನ್ನು ಕೊಡುತ್ತಲೇ ಇದ್ದಾರೆ. ಶ್ರೀಕೃಷ್ಣಮಠ ಕೋಮುವಾದದ ಕೇಂದ್ರವಾಗಿದೆ ಎಂದು ಪತ್ರಕರ್ತ, ಚಿಂತ್ರಕ ದಿನೇಶ್ ಅಮೀನ್ ಮಟ್ಟು ಆರೋಪಿಸಿದ್ದಾರೆ.

ನಗರದ ಬಾವುಟಗುಡ್ಡೆಯಲ್ಲಿನ ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ರವಿವಾರ ನಡೆದ ತೀಸ್ತಾ ಸೆಟಲ್ವಾಡ್ ಅವರ ಕನ್ನಡ ಅನುವಾದಿತ ‘ಸಂವಿಧಾನದ ಕಾಲಾಳು’ ಕೃತಿ ಬಿಡುಗಡೆ ಮತ್ತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಪೇಜಾವರ ಶ್ರೀಗಳಿದ್ದ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಮುಸ್ಲಿಮರಿಗಾಗಿ ಈ ಹಿಂದೆ ಇಫ್ತಾರ್‌ಕೂಟಗಳನ್ನು ಆಯೋಜಿಸಲಾಗಿತ್ತು. ಮುಸ್ಲಿಮರಂತೂ ಖುಷಿಯಲ್ಲಿ ತೇಲಾಡಿದ್ದರು. ಕೋಮುವಾದದ ಬಲೆಯಲ್ಲಿ ಬೀಳದಂತೆ ಕರಾವಳಿಗರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಕೋಮುವಾದ ಎದುರಿಸಿ ಜಾತ್ಯತೀತ, ಪ್ರಜಾಪ್ರಭುತ್ವ ರಕ್ಷಣೆ ಸುಲಭವಲ್ಲ. ಚುನಾವಣಾ ರಾಜಕಾರಣಕ್ಕಿಂತ ಪ್ರಬಲ ಅಸ್ತ್ರ ಸಾಂಸ್ಕೃತಿಕ ರಾಜಕಾರಣ ಇಂದಿನ ತುರ್ತು ಅಗತ್ಯವಾಗಿದೆ. ವ್ಯವಸ್ಥೆ ಸುಧಾರಣೆಗೆ ಚುನಾವಣೆಗಳು ಅಗತ್ಯ. ಜನಪ್ರತಿನಿಧಿಗಳು ಚುನಾವಣಾ ಅಧಿಕಾರ ಪಡೆದು ಅದನ್ನು ಜನಸಾಮಾನ್ಯರ ಬಳಿ ತೆಗೆದುಕೊಂಡು ಹೋಗುವ ಅಗತ್ಯವಿದೆ ಎಂದು ಹೇಳಿದರು.

ಯಕ್ಷಗಾನ ಕೇಸರಿಮಯ: ಸಾಂಸ್ಕೃತಿಕ ರಾಜಕಾರಣದಲ್ಲಿ ಚುನಾವಣೆ, ಮತದಾನ ಪ್ರಕ್ರಿಯೆಗಳು ಇರುವುದಿಲ್ಲ. ಇಲ್ಲಿ ನಳಿನ್‌ಗೆ ಮತ ನೀಡಿ; ಮೋದಿಗೆ ಮತ ನೀಡಿ ಎನ್ನುವುದಿಲ್ಲ. ಕರಾವಳಿಯಲ್ಲಿ ಯಕ್ಷಗಾನ, ಕೋಲ, ಬೂತಗಳಿವೆ. ಅದರಲ್ಲೂ ಯಕ್ಷಗಾನ ಕುಲಗೆಟ್ಟು ಹೋಗಿದೆ. ಯಕ್ಷಗಾನ ಪೂರ್ಣ ಕೇಸರಿಮಯವಾಗಿದ್ದು, ಮೋದಿ ಪರ ಮತಯಾಚನೆಗೆಂದೇ ಯಕ್ಷಗಾನ ಹಮ್ಮಿಕೊಳ್ಳುತ್ತಿರುವ ಪ್ರಸಂಗಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದರು.

ಬಿಜೆಪಿ ಸೋತರೆ ಗಲಭೆ ಹೆಚ್ಚಳ: 2002 ರಿಂದ ಗುಜರಾತ್‌ನಲ್ಲಿ ಗಲಭೆಗಳು ನಡೆದಿಲ್ಲ. ಸಂಘಪರಿವಾರ ಹಾಗೂ ಬಿಜೆಪಿಗೆ ಅಧಿಕಾರ ಕೊಟ್ಟರೆ ಯಾವುದೇ ಗಲಭೆಗಳು ನಡೆಯುವುದಿಲ್ಲ ಎನ್ನುವುದಕ್ಕೆ ಗುಜರಾತ್ ರಾಜಕಾರಣ ನಿದರ್ಶನ. ಕೇಂದ್ರದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಾರದಿದ್ದರೆ ಮತ್ತೆ ಗುಜರಾತ್‌ನಲ್ಲಿ ನಡೆದ ಗಲಭೆಗಳು ಮರುಕಳಿಸಲಿವೆ. ನಮಗೆ ಅಧಿಕಾರ ಕೊಟ್ಟರೆ ಬಾಯಿ ಮುಚ್ಚಿಕೊಂಡು ಇರುತ್ತೇವೆ; ಇಲ್ಲದಿದ್ದರೆ ಕೋಮುಗಲಭೆ ನಡೆಸುತ್ತೇವೆ ಎನ್ನುವ ಪರಿಪಾಠವನ್ನು ಬಿಜೆಪಿ ಹೊಂದಿದೆ ಎಂದು ಎಚ್ಚರಿಸಿದರು.

ಮುಸ್ಲಿಮರಲ್ಲಿ ಹೊಸ ನಾಯಕರಿಲ್ಲ: ಮುಸ್ಲಿಮರ ಮನೋಭಾವನೆಯೇ ವಿಶೇಷ. ತೀಸ್ತಾ ಸೆಟಲ್ವಾಡ್ ಬರುತ್ತಾರೆಂದರೆ ‘ನಮ್ಮ ಹಿರೋಯಿನ್ ಬರುತ್ತಿದ್ದಾರೆ’ ಎಂದು ಸಂತಸ ಪಡುತ್ತಾರೆ. ಆದರೆ ಅಲ್ಲಿಯೂ ಮುಸ್ಲಿಂ ಜನಾಂಗದಲ್ಲಿ ಹೊಸ ನಾಯಕರು ಹುಟ್ಟುತ್ತಿಲ್ಲ. 1983-84ರಲ್ಲಿ ಸಾರಾ ಅಬೂಬಕರ್ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ಹೊಡೆಯುತ್ತಿದ್ದರು. ಇಂದು ಸಾರಾ ಅಬೂಬಕರ್, ಬೊಳುವಾರ್ ಮುಹಮ್ಮದ್ ಕುಂಞಿ, ಫಕೀರ್ ಮುಹಮ್ಮದ್ ಕಟ್ಪಾಡಿ ಸೇರಿದಂತೆ ಹಲವರು ತೆರೆಮರೆಗೆ ಸರಿದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ದಿಕ್ಕುತಪ್ಪಿದ ಚಳವಳಿಗಳು: ದೇವರಾಜ ಅರಸು ಅವರ ಶ್ರಮದಿಂದ ಭೂಸುಧಾರಣೆ, ಮೀಸಲಾತಿ ಕಾಯ್ದೆಗಳು ಜಾರಿಗೆ ಬಂದವು. ಅಂದು ಸುಬ್ಬಯ್ಯ ಶೆಟ್ಟರು ಭೂಮಾಲಕರಾಗಿದ್ದರು. ಎಲ್ಲ ಭೂಮಾಲಕರ ವಿರುದ್ಧ ಹೋರಾಟಗಳು ನಡೆದಾಗ ಸುಬ್ಬಯ್ಯ ಶೆಟ್ಟರು ಎಲ್ಲರಿಗೂ ಮಾದರಿಯಾಗಿದ್ದರು. ಇದಿನಬ್ಬ ಅವರು ಹೆಚ್ಚು ಹೋರಾಟ ಮಾಡಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಆದರೆ ದೊಡ್ಡ ಮಟ್ಟದ ಹೋರಾಟಗಳು ಇತ್ತೀಚೆಗೆ ನಡೆಯುತ್ತಿಲ್ಲ. ಚಳವಳಿಗಳ ದಿಕ್ಕೇ ತಪ್ಪಿ ಹೋಗಿವೆ ಎಂದು ಅಮೀನ್ ಮಟ್ಟು ಬೇಸರ ವ್ಯಕ್ತಪಡಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News