ದಂತ ಭಾಗ್ಯ ಯೋಜನೆಯಡಿ 31 ಮಂದಿಗೆ ದಂತ ಪಂಕ್ತಿ ಜೋಡಣೆ

Update: 2019-05-19 12:52 GMT

ಉಡುಪಿ, ಮೇ 19: ರಾಷ್ಟ್ರೀಯ ಬಾಯಿ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ ಮತ್ತು ದಂತ ವೈದ್ಯಕೀಯ ವಿಭಾಗದ ವತಿಯಿಂದ ಭಾರತೀಯ ದಂತ ವೈದ್ಯಕೀಯ ಸಂಘ ಉಡುಪಿ ಜಿಲ್ಲಾ ಘಟಕ ಮತ್ತು ಅಂಬಲಪಾಡಿ ರೋಟರಿ ಕ್ಲಬ್‌ಗಳ ಸಹಯೋಗ ದೊಂದಿಗೆ ಅರ್ಹ ಫಲಾನುಭವಿಗಳಿಗೆ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರ ಡೆಂಚುರೋತ್ಸವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಆವರಣದಲ್ಲಿ ರವಿವಾರ ಆಯೋಜಿಸಲಾಗಿತ್ತು.

ಉಡುಪಿ ಜಿಲ್ಲೆಯಾದ್ಯಂತ ಈಗಾಗಲೇ ನೊಂದಾವಣೆ ಮಾಡಿಕೊಂಡ ಬಿಪಿಎಲ್ ಕುಟುಂಬದ 45ವರ್ಷ ಮೇಲ್ಪಟ್ಟ 60 ಮಂದಿಯನ್ನು ಈ ಶಿಬಿರ ದಲ್ಲಿ ತಪಾಸಣೆಗೆ ಒಳಪಡಿಸಲಾಗಿದ್ದು, ಅದರಲ್ಲಿ ಅರ್ಹ 31 ಮಂದಿಗೆ ಮಂಗಳೂರಿನ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜಿನ ಪ್ರಾಸ್ತೋಡಾಂಟಿಕ್ಸ್ ವಿಭಾಗದ ದಂತ ವೈದ್ಯರು, ಖಾಸಗಿ ಹಾಗೂ ಸರಕಾರಿ ದಂತ ವೈದ್ಯರು ದಂತ ಭಾಗ್ಯ ಯೋಜನೆಯಡಿ ಕೃತಕ ದಂತ ಪಂಕ್ತಿಯ್ನು ಜೋಡಣೆ ಮಾಡಿದರು.

ಶಿಬಿರವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಓಂ ಪ್ರಕಾಶ್ ಕಟ್ಟಿಮನಿ ಮಾತನಾಡಿ, ಇಂದು ಜಿಲ್ಲಾ ಮಟ್ಟದಲ್ಲಿ ಶಿಬಿರವನ್ನು ನಡೆಸಿದ್ದು, ಮುಂದೆ ತಾಲೂಕು ಮಟ್ಟದಲ್ಲಿ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ಶಿಬಿರವನ್ನು ನಡೆಸಿ ಅರ್ಹರಿಗೆ ದಂತ ಪಂಕ್ತಿ ಜೋಡಣೆ ಮಾಡಲಾಗುವುದು ಎಂದು ತಿಳಿಸಿದರು.

ಅಗತ್ಯ ಇರುವವರು ಆಯಾ ಆರೋಗ್ಯ ಕೇಂದ್ರದಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಖಾಸಗಿ ಆಸ್ಪತ್ರೆಯಲ್ಲಿ ದಂತ ಜೋಡಣೆ ಮಾಡಬೇಕಾದರೆ ಸುಮಾರು 9-10ಸಾವಿರ ರೂ. ವೆಚ್ಚ ತಗಲುತ್ತದೆ. ಆದರೆ ಸರಕಾರ ಈ ಯೋಜನೆಯಡಿ ಉಚಿತವಾಗಿ ಮಾಡುತ್ತಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಮದುಸೂಧನ್ ನಾಯಕ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜಿನ ಪ್ರಾಸ್ತೋಡಾಂಟಿಕ್ಸ್ ವಿಭಾಗದ ಡಾ.ರಕ್ಷಿತ್ ಹೆಗ್ಡೆ, ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಅಡಿಗ, ಭಾರತೀಯ ದಂತ ವೈದ್ಯ ಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ಮನೋಜ್ ಮ್ಯಾಕ್ಸಿಮ್ ಡಿ.ಲೀಮಾ, ರೋಟರಿ ಅಧ್ಯಕ್ಷ ಖಲೀಲ್ ಅಹ್ಮದ್, ಕಾರ್ಯದರ್ಶಿ ದುರ್ಗಾ ಪ್ರಸಾದ್ ಉಪಸ್ಥಿತರಿದ್ದರು.

ಜಿಲ್ಲಾಸ್ಪತ್ರೆಯ ಮುಖ್ಯ ದಂತ ಆರೋಗ್ಯಾಧಿಕಾರಿ ಡಾ.ಮಂಜುನಾಥ ಮೇಸ್ತ ಸ್ವಾಗತಿಸಿದರು. ಜಿಲ್ಲಾ ಎನ್‌ಓಎಚ್‌ಪಿ ಕಾರ್ಯಕ್ರಮ ಅಧಿಕಾರಿ ಡಾ.ಬೀಸು ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸಂತೋಷ್ ಬೈಲೂರು ವಂದಿಸಿದರು. ಸತೀ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News