ಮತ ಎಣಿಕೆಯಲ್ಲಿ ಆಯೋಗದ ಮಾರ್ಗಸೂಚಿ ಪಾಲಿಸಿ: ಕೃಷ್ಣ ಕುನಾಲ್

Update: 2019-05-19 13:08 GMT

ಉಡುಪಿ, ಮೇ 19: ಉಡುಪಿಯ ಸೈಂಟ್ ಸಿಸಿಲಿ ಶಾಲೆಯಲ್ಲಿ ಮೇ 23 ರಂದು ನಡೆಯುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿ ಮತ್ತು ಸಿಬ್ಬಂದಿ ಚುನಾವಣಾ ಆಯೋಗ ಸೂಚಿಸಿರುವ ಮಾರ್ಗಸೂಚಿಯನ್ವಯ ಕಾರ್ಯ ನಿರ್ವಹಿಸಬೇಕು ಎಂದು ವೀಕ್ಷಕ ಕೃಷ್ಣ ಕುನಾಲ್ ತಿಳಿಸಿದ್ದಾರೆ.

ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾಗಿರುವ ಎಣಿಕೆ ಸಹಾಯಕರು, ಎಣಿಕೆ ಮೇಲ್ವಿಚಾರಕರು ಮತ್ತು ಮೃಕ್ರೋ ಅಬ್‌ಸರ್ವರ್‌ಗಳಿಗೆ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ರವಿವಾರ ನಡೆದ ಎರಡನೆ ಹಂತದ ಮತ ಎಣಿಕೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಮತ ಎಣಿಕೆ ಕಾರ್ಯದಲ್ಲಿ ಗೊಂದಲಕ್ಕೆ ಎಡೆ ಮಾಡಿಕೊಡದಂತೆ ಕರ್ತವ್ಯ ನಿರ್ವಹಿಸಬೇಕು. ಎಣಿಕೆ ಕಾರ್ಯದ ಫಲಿತಾಂಶವು ಮರು ಮತ ಎಣಿಕೆಗೆ ಅವಕಾಶ ನೀಡದಂತೆ ಇರಬೇಕು. ಅಂಚೆ ಮತ ಪತ್ರಗಳ ಎಣಿಕೆಯಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು ಮತ್ತು ಅವುಗಳನ್ನು ಚಲಾಯಿಸುವಾಗ ಎಲ್ಲಾ ಅಗತ್ಯ ದಾಖಲೆಗಳು ಇದೆಯೇ, ಘೋಷಣಾ ಪತ್ರದಲ್ಲಿ ಮತದಾರರ ಸಹಿ ಆಗಿದೆಯೇ ಎಂಬುದನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಎಣಿಕೆ ಮಾಡಬೇಕು. ಅಂಚೆ ಮತಗಳು ತಿರಸ್ಕೃತವಾದರೆ ಸೂಕ್ತ ಕಾರಣಗಳನ್ನು ನಮೂದಿಸಬೇಕು ಎಂದರು.

ತರಬೇತಿ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಹಾಗೂ ಜಿಲ್ಲೆಯ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು ಮತ್ತು ತಹಶೀಲ್ದಾರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News