ರಸ್ತೆ ಸುರಕ್ಷತೆ ಜಾಗೃತಿಗಾಗಿ ಲಡಾಖ್‌ಗೆ ಬುಲೆಟ್ ಪ್ರಯಾಣ

Update: 2019-05-19 13:09 GMT

ಕುಂದಾಪುರ, ಮೇ 19: ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮ ಪಾಲನೆ ಕುರಿತ ಜಾಗೃತಿಗಾಗಿ ಹೊಸಾಡು ಗ್ರಾಮದ ಕಂಚುಗೋಡಿನ ವೆಂಕಟೇಶ್ ಖಾರ್ವಿ ಎಂಬವರ ಪುತ್ರ ಅನೀಶ್ ಖಾರ್ವಿ(25) ಕುಂದಾಪುರದಿಂದ ಜಮ್ಮು ಕಾಶ್ಮೀರದ ಲಡಾಖ್‌ಗೆ ಬುಲೆಟ್ ಪ್ರಯಾಣ ಕೈಗೊಂಡಿದ್ದಾರೆ.

ವಾಹನ ಚಲಾಯಿಸುವಾಗ ಸಂಚಾರಿ ನಿಯಮ ಪಾಲಿಸುವಂತೆ ಸಾರ್ವ ಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅನೀಶ್ ಖಾರ್ವಿ(25) ಮೇ 14 ರಂದು ಕುಂದಾಪುರದಿಂದ ಪ್ರಯಾಣ ಬೆಳೆಸಿದ್ದು, ಈಗಾಗಲೇ 1800 ಕಿ.ಮೀ. ದೂರ ಸಾಗಿದ್ದು, ಮೇ 18ರಂದು ರಾಜಸ್ಥಾನದ ಉದಯಪುರಕ್ಕೆ ತಲುಪಿದ್ದಾರೆ. ಇವರು ಭಾರತದ ಅತ್ಯಂತ ಎತ್ತರ ಪ್ರದೇಶವಾಗಿರುವ ಲಡಾಕ್‌ಗೆ ಹೊರಟಿದ್ದು, ಇಲ್ಲಿಗೆ ಪ್ರಯಾಣದ ಒಟ್ಟು 7,200 ಕಿ.ಮೀ. ಅನೀಶ್ ಪ್ರತಿದಿನ 500 ಕ್ಕೂ ಅಧಿಕ ಕಿ.ಮೀ. ಪ್ರಯಾಣ ಮಾಡುತ್ತಿದ್ದಾರೆ. ಕಳೆದ 4 ದಿನಗಳಲ್ಲಿ 1,800 ಕಿ.ಮೀ. ಕ್ರಮಿಸಿದ್ದಾರೆ. ಈ ಪ್ರಯಾಣ ಒಟ್ಟು 25 ದಿನಗಳದ್ದಾಗಿವೆ.

‘ಇಂದು ಹೆಚ್ಚಿನ ಸಂಖ್ಯೆಯ ಜನ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ನಾನು ಸಾಗುವ ದಾರಿಯುದ್ದಕ್ಕೂ ಅರಿವು ಮೂಡಿಸುತ್ತಿದ್ದೇನೆ. ಇದೇ ಕಾರಣಕ್ಕಾಗಿ ಈ ಪ್ರಯಾಣವನ್ನು ಕೈಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ರಾಜ್ಯಗಳಿಗೆ ಸಂಚರಿಸುವ ಯೋಜನೆ ಕೂಡ ನನ್ನಲ್ಲಿ ಇದೆ ಎಂದು ಅನೀಶ್ ಖಾರ್ವಿ ತಿಳಿಸಿದ್ದಾರೆ.

‘ಈ ಹಿಂದೆ ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳೆಲ್ಲಿ ತಿರುಗಾಡಿದ್ದೇನೆ. ಆದರೆ ಕರ್ನಾಟಕ ಹೊರತುಪಡಿಸಿ ಇದು ನನ್ನ ಮೊದಲ ಪ್ರಯಾಣವಾಗಿದೆ. ಕಳೆದ 6 ತಿಂಗಳಿನಿಂದ ಇದಕ್ಕಾಗಿ ಸಿದ್ಧತೆ ನಡೆಸಿದ್ದೇನೆ. ಆರಂಭದಲ್ಲಿ ನನ್ನ ಜೊತೆ ಸ್ನೇಹಿತರು ಬರುತ್ತಾರೆ ಎಂದು ಹೇಳಿದ್ದರು. ಕೊನೆ ಗಳಿಗೆಯಲ್ಲಿ ಯಾರು ಬಾರದೆ ಇದ್ದಾಗ ನಾನೊಬ್ಬನೆ ಪ್ರಯಾಣ ಹೊರಟಿದ್ದೇನೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News