15 ಹೊಸ ಬೋರ್‌ವೆಲ್‌ಗೆ ಆದೇಶ, ತಜ್ಞರ ವರದಿ ಆಧಾರದಲ್ಲಿ ಇನ್ನಷ್ಟು ಬೋರ್‌ವೆಲ್: ಸಚಿವ ಖಾದರ್

Update: 2019-05-19 14:31 GMT

ಮಂಗಳೂರು, ಮೇ 19: ಜಿಲ್ಲೆಯಾದ್ಯಂತ ನೀರಿನ ಸಮಸ್ಯೆ ಉಲ್ಬಣಿಸುವ ಲಕ್ಷಣ ಕಾಣಿಸಿಕೊಂಡಿರುವ ಬೆನ್ನಲ್ಲೇ ಜಿಲ್ಲಾಡಳಿತ ಬೋರ್ವೆಲ್‌ಗಳ ಕೊರತೆಕ್ಕೆ ಮುಂದಾಗಿದೆ. ಈಗಾಗಲೇ ಮಂಗಳೂರು ನಗರದಲ್ಲಿ 15 ಹೊಸ ಬೋರ್‌ವೆಲ್‌ಗಳ ಕೊರೆತಕ್ಕೆ ಆದೇಶ ನೀಡಿ, 6 ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ. ನಾಲ್ಕರಲ್ಲಿ ಉತ್ತಮ ನೀರು ಕೂಡಾ ಲಭ್ಯವಾಗಿದೆ.

ಇದೀಗ ಮತ್ತೆ ಹೆಚ್ಚುವರಿ ಬೋರ್‌ವೆಲ್‌ಗಳನ್ನು ಕೊರೆಯುವ ಉದ್ದೇಶದಿಂದ ಭೂಗರ್ಭ ಶಾಸ್ತ್ರಜ್ಞರ ವರದಿಯನ್ನು ಕೇಳಲಾಗಿದೆ. ವರದಿ ಆಧಾರದಲ್ಲಿ ಮುಂದೆ ಬೋರ್‌ವೆಲ್‌ಗಳನ್ನು ಕೊರೆಯಲು ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ತುಂಬೆಯಲ್ಲಿ ನೀರಿನ ಮಟ್ಟ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಜಿಲ್ಲಾಡಳಿತ ಹಾಗೂ ಮನಪಾ ಸೂಕ್ತ ಯೋಜನೆಯನ್ನು ರೂಪಿಸಿ ರೇಶನಿಂಗ್ ಮಾಡಿದ ನಿಟ್ಟಿನಲ್ಲಿ ಒಂದು ಹಂತದಲ್ಲಿ ನೀರಿನ ತೀವ್ರತೆರನಾದ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಗಿದೆ. ಜನತೆ ಕೂಡಾ ಸಹಕಾರ ನೀಡಿದ್ದಾರೆ ಎಂದರು.

ನೀರು ಪೂರೈಕೆ ಸ್ಥಗಿತಗೊಂಡಾಗ ನೀರು ಬೇಕಾದಲ್ಲಿ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ 20 ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚುವರಿ 5 ಟ್ಯಾಂಕರ್‌ಗಳನ್ನು ಸೇರ್ಪಡೆಗೊಳಿಸಲಾಗುವುದು. ಟ್ಯಾಂಕರ್ ನೀರು ಪೂರೈಕೆಗಾಗಿ ಈಗಾಗಲೇ ನಗರದ 14 ತೆರೆದ ಬಾವಿಗಳನ್ನು ಸ್ವಚ್ಛಗೊಳಿಸಿ ದುರಸ್ತಿಗೊಳಿಸಲಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿಯೂ ನೀರಿನ ಸಮಸ್ಯೆಗೆ ಬೋರ್‌ವೆಲ್ ಕೊರೆಸಲು ವ್ಯವಸ್ಥೆ ಮಾಡಲಾಗುತ್ತದೆ. ಸಾಧ್ಯವಾಗದ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದು ಅವರು ಹೇಳಿದರು.

ನೀರಿನ ಸಮಸ್ಯೆ ಬಗ್ಗೆ ಜಿಲ್ಲಾ ಮಟ್ಟದ ಸಭೆ

ಮಂಗಳೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ, ಅತಿವಷ್ಟಿ ಹಾಗೂ ಅನಾವೃಷ್ಟಿ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಜಿಲ್ಲಾಮಟ್ಟ ದ ಸಭೆಯನ್ನು ಮೇ 20ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ಕರೆಯಲಾಗಿದೆ ಎಂದು ಸಚಿವ ಖಾದರ್ ತಿಳಿಸಿದರು.

ನೀರಿನ ಸಮಸ್ಯೆಗಾಗಿ ಕಂಟ್ರೋಲ್ ರೂಂಗೆ ಕರೆ ಮಾಡಿ

ನೀರಿನ ಸಮಸ್ಯೆ ಇರುವವರು ಮಂಗಳೂರು ಮಹಾನಗರ ಪಾಲಿಕೆಯ ಸಹಾಯವಾಣಿ 2220303 ಅಥವಾ 2220362 ಸ್ಥಿರ ದೂರವಾಣಿಗೆ ಕರೆ ಮಾಡಬಹುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.

ಜನತೆಯ ಬಯಕೆಯಂತೆ ಫಲಿತಾಂಶ

ಮೇ 23ರಂದು ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಯು.ಟಿ.ಖಾದರ್, ದೇಶದ ಜನತೆ ಏನನನ್ನು ಬಯಸುತ್ತಾರೋ ಆ ರೀತಿಯ ಫಲಿತಾಂಶ ಹೊರಬೀಳಲಿದೆ. ಮಂಗಳೂರಿನಲ್ಲಿಯೂ ಕಾಂಗ್ರೆಸ್ ಗೆಲ್ಲಲಿದೆ ಎಂದರು.

ಬಸವರಾಜ ಹೊರಟ್ಟಿ ಅವರು ಅವರ ವೈಯಕ್ತಿಕ ಅಭಿಪ್ರಾಯ ನೀಡಿದ್ದಾರೆ. ಅದಕ್ಕೆ ಮಹತ್ವ ನೀಡಬೇಕಾಗಿಲ್ಲ. ಸರಕಾರ ಸುಭದ್ರವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನ ಬೇರ್ಪಡಿಸಲು ಸಾಧ್ಯವಿಲ್ಲ. ಪ್ರಸಕ್ತ ಸರಕಾರ ಸುಭದ್ರ ಸೇವೆಯನ್ನು ಒದಗಿಸಲಿದೆ ಎಂದು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News