ಸ್ವರ್ಣ ನದಿಯ ಹೂಳೆತ್ತಲು 5.24 ಕೋಟಿ ಮೊತ್ತದ ಟೆಂಡರ್
ಉಡುಪಿ, ಮೇ 19: ಉಡುಪಿ ನಗರಸಭೆಗೆ ನೀರು ಪೂರೈಸುವ ಸ್ವರ್ಣ ನದಿಯ ಬಜೆ ಅಣೆಕಟ್ಟಿನಲ್ಲಿ ಈ ಬಾರಿ ನೀರು ಸಂಪೂರ್ಣ ಖಾಲಿಯಾ ಗಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತದ ಅನುಮತಿಯಂತೆ ನದಿಯಲ್ಲಿನ ಹೂಳು ತೆಗೆಯಲು ಉಡುಪಿ ನಗರಸಭೆಯು ಟೆಂಡರ್ ಕರೆದಿದೆ.
ಒಟ್ಟು 5.24 ಕೋಟಿ ರೂ. ವೆಚ್ಚದಲ್ಲಿ ಎರಡು ಟೆಂಡರ್‌ನ್ನು ಮೇ 20ರಂದು ಸಂಜೆ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗುತ್ತಿದ್ದು, ಗುತ್ತಿಗೆ ದಾರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಟೆಂಡರ್ ಪ್ರಕಾರ ನದಿಯ ಹೂಳನ್ನು ತೆಗೆಯುವುದು ಮ್ತು ನೀರನ್ನು ಹಾಯಿಸು ವುದಾಗಿದೆ.
ಸ್ವರ್ಣ ನದಿಯಲ್ಲಿ ಹೂಳು ತುಂಬಿದ ಪರಿಣಾಮ ಹಲವು ಕಡೆ ಹಳ್ಳಗಳಂತೆ ನೀರು ಶೇಖರಣೆಯಾಗಿದ್ದು, ಇದರಿಂದ ನೀರು ಬಜೆ ಡ್ಯಾಂವರೆಗೆ ಹರಿದು ಬರಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣದಿಂದ ಮೇ 4ರಂದು ಬಜೆ ಅಣೆ ಕಟ್ಟಿನಲ್ಲಿ ನೀರು ಸಂಪೂರ್ಣ ಖಾಲಿಯಾಗಿದ್ದು, ಮೇ5ರಿಂದ ಮೂರು ದಿನಗಳ ಕಾಲ ನಗರಕ್ಕೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿತ್ತು.
ಮೇ 7ರಿಂದ ಸ್ವರ್ಣ ನದಿಯಲ್ಲಿ ಡ್ರೆಜ್ಜಿಂಗ್ ಕಾರ್ಯ ಆರಂಭಿಸಿ ಬಜೆ ಅಣೆಕಟ್ಟಿನ ಜಾಕ್‌ವೆಲ್‌ಗೆ ನೀರು ಹರಿದು ಬರುವಂತೆ ಮಾಡಲಾಗಿತ್ತು. ಈ ಮಧ್ಯೆ ನಗರದಲ್ಲಿ ನೀರು ಇಲ್ಲದೆ ಜನ ತೀವ್ರ ಸಮಸ್ಯೆ ಎದುರಿಸಿದರು. ನೀರಿನ ಕೊರತೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಗರಸಭೆ ಯನ್ನು ಆರು ವಿಭಾಗಗಳನ್ನಾಗಿ ವಿಂಗಡಿಸಿ, ಮೂರು ದಿನಗಳ ಬದಲಾಗಿ ಆರು ದಿನಗಳಿ ಗೊಮ್ಮೆ ನೀರು ಸರಬರಾಜು ಮಾಡುವ ಕ್ರಮವನ್ನು ಆಂಭಿಸಿತು.
ಇದೀಗ ಜಿಲ್ಲಾಧಿಕಾರಿಗಳ ಅನುಮತಿಯಂತೆ ಉಡುಪಿ ನಗರಸಭೆಯು ಬಜೆ ಅಣೆಕಟ್ಟಿನಿಂದ ಸ್ವರ್ಣ ನದಿ ಪಾತ್ರದಲ್ಲಿನ ಮಾಣೈ ಸೇತುವೆವರೆಗೆ 2.90 ಕೋಟಿ ರೂ. ಹಾಗೂ ಮಾಣೈ ಸೇತುವೆಯಿಂದ ಶೀರೂರು ಮಠದ ಪ್ರದೇಶದವರೆಗೆ 2.34ಕೋಟಿ ರೂ. ಅಂದಾಜು ಮೊತ್ತದ ಎರಡು ಟೆಂಡರಗಳನ್ನು ಕರೆದಿದೆ. ಸ್ವರ್ಣ ನದಿಯ ಸುಮಾರು ಏಳು ಕಿ.ಮೀ. ಉದ್ದದ ನದಿ ಪಾತ್ರವನ್ನು ಹೂಳೆತ್ತಲು ಯೋಜನೆ ರೂಪಿಸಲಾಗಿದೆ. ಇದಕ್ಕೆ ನಗರಸಭೆ ನಿಧಿಯನ್ನು ಬಳಕೆ ಮಾಡಲಾಗುತ್ತಿದೆ ಎಂದು ಉಡುಪಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಗುತ್ತಿಗೆದಾರರು ನದಿಯಿಂದ ತೆಗೆದ ಹೂಳನ್ನು ತಮ್ಮ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಹೂಳು ತೆಗೆಯುವ ದೊರೆಯುವ ಮರಳನ್ನು ಜಿಲ್ಲಾಡಳಿತದಿಂದ ಈಗಾಗಲೇ ಮರಳು ಸಂಬಂಧ ರಚಿಸಲಾದ ಏಳು ಮಂದಿ ಸದಸ್ಯರ ಕಮಿಟಿಗೆ ಹಸ್ತಾಂತರಿಸಲಾಗುತ್ತದೆ. ಟೆಂಡರ್ ಅವಧಿ ಆರು ತಿಂಗಳಾ ಗಿದ್ದು, ಮಳೆ ಬಂದರೂ ಕಾಮಗಾರಿ ಮುಂದುವರೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
2010ರಿಂದ ಸ್ವರ್ಣ ನದಿಯಿಂದ ಹೂಳು ತೆಗೆಯುವ ಕಾರ್ಯಕ್ಕೆ ನಗರಸಭೆ ಪ್ರಯತ್ನ ಪಟ್ಟಿತ್ತು. ಆಗ ಸುಪ್ರಿಂ ಕೋರ್ಟ್ ಆದೇಶದಂತೆ ಕುಡಿಯುವ ನೀರು ಪೂರೈಸುವ ನದಿಗಳಿಂದ ಯಾಂತ್ರೀಕೃತವಾಗಿ ಹೂಳು ತೆಗೆಯಲು ಅವಕಾಶ ಇರಲಿಲ್ಲ. ಇದೇ ರೀತಿ 2013ರಲ್ಲಿ ಉಡುಪಿ ಜಿಲ್ಲೆಯಲ್ಲಿ ಹಸಿರು ನ್ಯಾಯ ಪೀಠ ಮರಳುಗಾರಿಕೆ ನಿಷೇಧಿಸಿ ನೀಡಿರುವ ಆದೇಶದಿಂದ ಸ್ವರ್ಣ ನದಿಯಿಂದ ಹೂಳು ತೆಗೆಯಲು ಅಡ್ಡಿಯಾಯಿತು. 2016-17ರಲ್ಲಿ ಹೂಳು ತೆಗೆಯುವ ಕಾರ್ಯಕ್ಕೆ ನಗರಸಭೆ ಮುಂದಾಗಿದ್ದರೂ ರಾಜಕೀಯ ಕಾರಣದಿಂದ ಅದು ಅರ್ಧದಲ್ಲೇ ಸ್ಥಗಿತಗೊಂಡಿತ್ತು.
‘ಈ ಬಾರಿ ಬಜೆಯಲ್ಲಿ ನೀರು ಖಾಲಿಯಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಅಗತ್ಯ ಮನಗಂಡು ಸ್ವರ್ಣ ನದಿ ಹೂಳೆತ್ತಲು ಅನುಮತಿ ನೀಡಲಾಗಿದೆ. ಇದಕ್ಕೆ ಟೆಂಡರ್ ಕರೆಯಲಾಗಿದ್ದು, ನಗರಸಭೆ ನಿಧಿಯನ್ನು ಬಳಸಲಾಗುತ್ತಿದೆ’
- ಹೆಫ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿ, ಉಡುಪಿ