ಕರಾವಳಿ ಭಾಗದಲ್ಲಿ ಚೆಸ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ: ಡಾ. ಸಭಾಹಿತ್

Update: 2019-05-19 15:30 GMT

ಮಣಿಪಾಲ, ಮೇ 19: ಕಳೆದೊಂದು ದಶಕದಿಂದ ಕರಾವಳಿ ಪ್ರದೇಶದಲ್ಲಿ ಚೆಸ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದ್ದು ಜಿಲ್ಲೆಯಲ್ಲಿಯೇ ನೂರಾರು ಚೆಸ್ ಕ್ರೀಡಾಳುಗಳು ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇದಕ್ಕೆ ಈ ಭಾಗದ ಸಂಘ ಸಂಸ್ಥೆಗಳು ಸಾಕಷ್ಟು ಪಂದ್ಯಕೂಟಗಳನ್ನು ಆಯೋಜಿಸಿ ಚೆಸ್ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿರುವುದೇ ಕಾರಣ ಎಂದು ಮಣಿಪಾಲ ಮಾಹೆ ರಿಜಿಸ್ಟ್ರಾರ್ ಡಾ.ನಾರಾಯಣ್ ಸಭಾಹಿತ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಮತ್ತು ಮಣಿಪಾಲ ಲಯನ್ಸ್ ಕ್ಲಬ್‌ಗಳ ಜಂಟಿ ಆಶ್ರಯದಲ್ಲಿ ರವಿವಾರ ಮಣಿಪಾಲ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಲಾದ 15ನೆ ಲಯನ್ ಕಲ್ಯಾ ದೇವರಾಯ ಸ್ಮರಣಾರ್ಥ ಅಂತರ ಜಿಲ್ಲಾ ಚೆಸ್ ಪಂದ್ಯಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮಣಿಪಾಲ ಕೆಎಂಸಿಯ ವೈದ್ಯ ಡಾ.ಶರತ್ ರಾವ್ ಮಾತನಾಡಿ, ಇಂದಿನ ಕಾಲದಲ್ಲಿ ಕೊರತೆ ಇರುವ ಮಾನವೀಯ ಮೌಲ್ಯಗಳು ಚೆಸ್ ಆಡುವುದರಿಂದ ಮಕ್ಕಳಲ್ಲಿ ಕಾಣಬಹುದಾಗಿದೆ. ಈ ಕ್ರೀಡೆ ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಮೊಬೈಲ್ಗೆ ಅಂಟಿಕೊಳ್ಳುವ ಕೆಟ್ಟ ಚಾಳಿಯನ್ನು ಕೂಡ ಚೆಸ್ ಆಡುವುದರಿಂದ ದೂರ ಮಾಡಿಕೊಳ್ಳಬಹುದು ಎಂದರು.

ಚೆಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಬಾಬು ಪೂಜಾರ್, ಕೋಶಾಧಿಕಾರಿ ರತ್ನಾಕರ್ ಶೆಟ್ಟಿ, ನಿರ್ಣಾಯಕ ಸಾಕ್ಷಾತ್ ಯು.ಕೆ., ನ್ಯಾಯವಾದಿ ಹಂಝತ್ ಕೋಡಿ, ಡಾ.ಸುರೇಶ್ ಶೆಣೈ, ಡಾ.ಶೋಭಾ ಕಾಮತ್, ಡಾ.ರಾಜೇಶ್ ಭಕ್ತ ಮೊದಲಾದವರು ಉಪಸ್ಥಿತರಿದ್ದರು.

 ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ರಾಜಗೋಪಾಲ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಯನ್ಸ್ ಕ್ಲಬ್ ಮಣಿಪಾಲ ಅಧ್ಯಕ್ಷೆ ಶ್ರುತಿ ಜಿ.ಶೆಣೈ ಸ್ವಾಗತಿಸಿದರು. ಡಾ.ಗಣೇಶ್ ಪೈ ಕಾರ್ಯಕ್ರಮ ನಿರೂಪಿಸಿದರು. ಡಾ. ಉಲ್ಲಾಸ್ ಕಾಮತ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News