ಪತ್ರಿಕೆ, ದೃಶ್ಯ ಮಾಧ್ಯಮದಲ್ಲಿ ವಿಪುಲ ಅವಕಾಶ: ವಕೀಲ ಅಬ್ದುಲ್ ಮಜೀದ್ ಪುತ್ತೂರು

Update: 2019-05-19 15:44 GMT

ಬಂಟ್ವಾಳ, ಮೇ 19: ಪತ್ರಿಕೆ, ವೆಬ್‍ಸೈಟ್ ಹಾಗೂ ದೃಶ್ಯ ಮಾಧ್ಯಮದಲ್ಲಿ ವಿಫುಲ ಅವಕಾಶಗಳಿವೆ ಎಂದು ಜಿಲ್ಲಾ ಮತ್ತು ಉಚ್ಚ ನ್ಯಾಯಾಲಯದ ವಕೀಲ ಅಬ್ದುಲ್ ಮಜೀದ್ ಪುತ್ತೂರು ಹೇಳಿದ್ದಾರೆ.

ಕೊಳಕೆ ಅಲ್ಲಝಿನತುಲ್ ರಿಪಾಯಿಯ್ಯ ದಫ್ ಕಮಿಟಿ ಹಾಗೂ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಕೊಳಕೆ ಇದರ ಆಶ್ರಯದಲ್ಲಿ ಕೊಳಕೆ ಸಮುದಾಯ ಭವನದಲ್ಲಿ ರವಿವಾರ ಸಂಜೆ ನಡೆದ "ಎಸೆಸೆಲ್ಸಿ ನಂತರ ಮುಂದೇನು ?" ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತಿದ್ದರು.

ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳು ದಿನೇ ದಿನೇ ಬೆಳೆಯುತ್ತಿದ್ದು, ಇದರಲ್ಲಿ ರಿಪೋರ್ಟಿಂಗ್, ಟಿವಿ ನಿರೂಪಕರಾಗಿ ಸಾಕಷ್ಟು ಅವಕಾಶಗಳಿವೆ. ಈ ವಿಭಾಗದಲ್ಲಿ ಮುಂದುವರಿಯಬೇಕಾದರೆ ಭಾಷಾ ಪ್ರಬುದ್ಧತೆ ಮತ್ತು ಸ್ಪಷ್ಟವಾಗಿ ಮಾತನಾಡುವ ಕಲೆಯನ್ನು ಹೊಂದಿರಬೇಕು. ಅದಲ್ಲದೆ, ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ತಿಳಿದಿರಬೇಕು. ದಿನಾಲೂ ಒಂದು ಪತ್ರಿಕೆಯನ್ನಾದರೂ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದರು.

ದೇವಮಾತ ಶಾಲೆಯ ಮುಖ್ಯೋಪಾಧ್ಯಾಯ ಫಾದರ್ ದೀಪಕ್ ಡೆಸಾ ಮಾತನಾಡಿ, ಯಾವುದೇ ವಿಷಯಲ್ಲಿ ಆಸಕ್ತಿಯಿಂದ ಕಲಿತಾಗ ಮಾತ್ರ ಗುರಿ ಹಾಗೂ ಯಶಸ್ಸು ಹೊಂದಲು ಸಾಧ್ಯ. ಜೀವನದಲ್ಲಿ ಸಾಧನೆಯ ಆಲೋಚನೆ ಮತ್ತು ಆಸಕ್ತಿ ನಮ್ಮಲ್ಲಿರರಬೇಕು ಎಂದರು.

ಬಂಟ್ವಾಳ ನಗರ ಠಾಣೆ ಎಸ್ಸೈ ಚಂದ್ರಶೇಖರ್ ಎಚ್.ವಿ. ಮಾತನಾಡಿ, ವಿದ್ಯಾರ್ಥಿಗಳಲ್ಲಿ ಒಂದಲ್ಲ ಒಂದು ರೀತಿಯಾದ ಸೂಪ್ತ ಪತ್ರಿಭೆಗಳಿವೆ. ತಮ್ಮ ಸಾಮಥ್ರ್ಯದ ಅರಿವು ವಿದ್ಯಾರ್ಥಿಗಳಲ್ಲಿರಬೇಕು. ನಿರ್ದಿಷ್ಟ ಸಮಯದಲ್ಲಿ ಶ್ರದ್ಧೆಯಿಂದ ಕಲಿತಾಗ ಯಶಸ್ಸು ನಮ್ಮದಾಗುತ್ತದೆ ಎಂದ ಅವರು, ನಾವು ಕಲಿಯುವಾಗ ಅವಕಾಶಗಳಲ್ಲಿರಲಿಲ್ಲ. ಆದರೆ, ಇದೀಗ ವಿವಿಧ ಕ್ಷೇತ್ರಗಳಲ್ಲಿ ಬಹಳಷ್ಟು ಅವಕಾಶಗಳಿವೆ. ತಂತ್ರಜ್ಞಾನವು ಮುಂದು ವರಿದಿದ್ದು, ಬೆರಳ ತುದಿಯಲ್ಲಿ ಎಲ್ಲ ಮಾಹಿತಿ ಸಿಗಲು ಸಾಧ್ಯವಾಗುತ್ತದೆ ಎಂದರು.

ವಿದ್ಯಾರ್ಥಿಗಳು ಎಲ್ಲ ವಿಷಯ, ವಿಚಾರಗಳ ಸ್ವಲ್ವ ಮಾಹಿತಿ ಕಲಿತಿರಬೇಕು. ಇದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಹಕಾರಿಯಾಗಲಿದೆ ಎಂದರು.
ಎಆರ್‍ಡಿಕೆ ಅಧ್ಯಕ್ಷ ರಹೀಂ ಸಖಾಫಿ ಕೊಳಕೆ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಎಂಜೆಎಂ ಅಧ್ಯಕ್ಷ ಪಿ.ಕೆ.ಅಬೂಬಕರ್, ಮುದರ್ರಿಸ್ ಬದ್ರುದ್ದೀನ್ ಅಹ್ಸನಿ ಅಳಿಕೆ, ಎಚ್‍ಐಎಂ ಮುಖ್ಯಸ್ಥ ಅಬ್ದುಲ್ ರಝಾಕ್ ಸಖಾಫಿ, ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಅಧ್ಯಕ್ಷ ಅಕ್ಬರ್ ಅಲಿ ಮದನಿ, ಎಸ್ಸೆಸ್ಸೆಫ್ ಪಾಣೆಮಂಗಳೂರು ಸೆಕ್ಟರ್ ಅಧ್ಯಕ್ಷ ಉಸ್ಮಾನ್ ಸಖಾಫಿ, ಎಆರ್‍ಡಿಕೆ ಕೊಳಕೆ ಪ್ರಧಾನ ಕಾರ್ಯದರ್ಶಿ ಜಾಫರ್ ಕೊಳಕೆ ಉಪಸ್ಥಿತರಿದ್ದರು. ಎಆರ್‍ಡಿಕೆ ಉಪಾಧ್ಯಕ್ಷ ಮಲಿಕ್ ಕೊಳಕೆ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News