ಇದು ನಮ್ಮ ಕೊನೆಯ ಮತದಾನ ಎಂದು ಭೀತಿ ವ್ಯಕ್ತಪಡಿಸಿರುವ ಜನರು ಯಾರು ಗೊತ್ತಾ ?

Update: 2019-05-19 16:34 GMT

ಘೋರಮಾರಾ ದ್ವೀಪ(ಪ.ಬಂಗಾಳ),ಮೇ 19: ರವಿವಾರ ಲೋಕಸಭಾ ಚುನಾವಣೆಗಳ ಅಂತಿಮ ಹಂತದಲ್ಲಿ ತಾವು ಚಲಾಯಿಸಿದ ಮತಗಳೇ ತಮ್ಮ ದ್ವೀಪವು ಬಂಗಾಳ ಕೊಲ್ಲಿಯಲ್ಲಿ ಮುಳುಗುವ ಮುನ್ನ ತಮ್ಮ ಅಂತಿಮ ಮತದಾನವಾಗಬಹುದು ಎಂದು ಘೋರಮಾರಾ ದ್ವೀಪದ ನಿವಾಸಿಗಳು ಭೀತಿಯನ್ನು ವ್ಯಕ್ತಪಡಿಸಿದ್ದಾರೆ. ಜಾಗತಿಕ ಹವಾಮಾನ ಏರಿಕೆಯಿಂದಾಗಿ ಸುಂದರಬನ ಮುಖಜ ಪ್ರದೇಶದಲ್ಲಿರುವ ಈ ದ್ವೀಪವೀಗ ಮುಳುಗುವ ಅಪಾಯದಲ್ಲಿದೆ. ಈ ದ್ವೀಪದ ಸುಮಾರು 4,000 ಜನರು ಮತದಾರರ ಪಟ್ಟಿಯಲ್ಲಿದ್ದಾರೆ.

“ಉಳ್ಳವರು ದ್ವೀಪವನ್ನು ಈಗಾಗಲೇ ತೊರೆದಿದ್ದಾರೆ. ಆದರೆ ನನ್ನಂತಹ ಬಡವರಿಗೆ ಅದು ಹೇಗೆ ಸಾಧ್ಯ? ಹೊಸ ಬದುಕು ಆರಂಭಿಸಲು ಸರಕಾರವು ನಮಗೆ ನೆರವಾಗುತ್ತದೆ” ಎಂದು ನಾವು ಆಶಿಸಿದ್ದೇವೆ ಎಂದು ದ್ವೀಪದ ಬಡ ಮೀನುಗಾರ ಗೋರಾಂಗ ದೊಲುಯಿ ಸುದ್ದಿಗಾರರ ಬಳಿ ಅಳಲು ತೋಡಿಕೊಂಡರು.

ಕಳೆದ ಮೂರು ದಶಕಗಳಲ್ಲಿ ಉಕ್ಕೇರುತ್ತಿರುವ ಸಮುದ್ರದಿಂದಾಗಿ ತನ್ನ ಅರ್ಧ ಭಾಗವನ್ನು ಕಳೆದುಕೊಂಡಿರುವ ಘೋರಮಾರಾ ಈಗ ಸುಮಾರು ನಾಲ್ಕು ಚ.ಕಿ.ಮೀ.ವಿಸ್ತೀರ್ಣವನ್ನು ಮಾತ್ರ ಹೊಂದಿದೆ.

ತನ್ನ ಮತ ಮತ್ತು ಮೇ 23ರಂದು ಪ್ರಕಟವಾಗಲಿರುವ ಚುನಾವಣಾ ಫಲಿತಾಂಶ ದ್ವೀಪದ ಭವಿಷ್ಯವನ್ನು ಬದಲಿಸಲಿದೆ ಎಂಬ ಆಶಾಭಾವನೆ ಹೊಂದಿರುವ ದೊಲುಯಿ, “ನಮಗೆ ಇಲ್ಲಿ ಬದುಕಲಾಗದು ಎನ್ನುವವರೆಗೂ ನಾವು ಇಲ್ಲಿ ವಾಸಿಸುತ್ತೇವೆ” ಎಂದರು. ಈಗ ಒಂದು ಗಂಟೆ ಲಾಂಚ್‌ನಲ್ಲಿ ಪ್ರಯಾಣದ ಬಳಿಕವಷ್ಟೇ ದ್ವೀಪವಾಸಿಗಳು ಮುಖ್ಯಭೂಮಿಯನ್ನು ಸೇರಬಹುದು.

 ಇನ್ನೊಂದು 2-3 ವರ್ಷಗಳಲ್ಲಿ ಈ ದ್ವೀಪ ಇಲ್ಲವಾಗಬಹುದು, ಪ್ರತಿ ಮಳೆಗಾಲದಲ್ಲಿಯೂ ಇಲ್ಲಿ ಸಮುದ್ರ ಕೊರೆತ ಹೆಚ್ಚುತ್ತಲೇ ಇದೆ ಎಂದು ಘೋರಮಾರಾದಲ್ಲಿ ಚುನಾವಣಾಧಿಕಾರಿ ಸ್ವಾತಿ ಬಂಡೋಪಾಧ್ಯಾಯ ಹೇಳಿದರು. ಇದು ತಡೆಯಲು ಸಾಧ್ಯವಿಲ್ಲದ ನೈಸರ್ಗಿಕ ಪ್ರಕ್ರಿಯೆ ಎನ್ನುವುದು ಜನರಿಗೂ ಗೊತ್ತು ಮತ್ತು ಅವರು ಕ್ರಮೇಣ ಮುಖ್ಯಭೂಮಿಗೆ ವಲಸೆ ಹೋಗುತ್ತಿದ್ದಾರೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ಸಾವಿರಾರು ಘೋರಮಾರಾ ನಿವಾಸಿಗಳು ದೊಡ್ಡ ದ್ವೀಪವಾಗಿರುವ ಸಾಗರ್ ಅಥವಾ ಮುಖ್ಯಭೂಮಿಯಲ್ಲಿನ ಕಾಕದ್ವೀಪ್‌ಗೆ ವಲಸೆ ಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News