ಆನೆ ಮೇಲೆ ಕುಳಿತು ಮದುವೆ ದಿಬ್ಬಣ: ಮೇಲ್ಜಾತಿಗಳಿಗೆ ಸಡ್ಡು ಹೊಡೆದ ದಲಿತ ಯುವಕ

Update: 2019-05-19 16:41 GMT

ಅಹ್ಮದಾಬಾದ್,ಮೇ 19: ಮದುವೆ ಮೆರವಣಿಗೆಗಳಲ್ಲಿ ದಲಿತರು ಕುದುರೆಗಳಲ್ಲಿ ಸಾಗುವುದರ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರದ ಪ್ರಕರಣಗಳ ನಡುವೆಯೇ ನಗರದಲ್ಲಿ 23ರ ಹರೆಯದ ಪರಿಶಿಷ್ಟ ಜಾತಿಯ ಯುವಕನೋರ್ವ ವಧುವಿನ ಮನೆಗೆ ಆನೆಯ ಮೇಲೆ ಮೆರವಣಿಗೆಯಲ್ಲಿ ಸಾಗುವ ಮೂಲಕ ಮೇಲ್ಜಾತಿಗಳಿಗೆ ಸಡ್ಡು ಹೊಡೆದಿದ್ದಾನೆ. ಮೆರವಣಿಗೆಯುದ್ದಕ್ಕೂ ಈ ಯುವಕ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕೈಯಲ್ಲಿ ಹಿಡಿದುಕೊಂಡಿದ್ದ.

 ಯುವಕನ ದಿಬ್ಬಣದ ಮೆರವಣಿಗೆಯ ವೀಡಿಯೊ ತುಣುಕುಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

 ಸುರೇಂದ್ರ ನಗರದ ನಿವಾಸಿ ವಿಶಾಲ ಮಕ್ವಾನಾ ತನ್ನ ದಿಬ್ಬಣದೊಂದಿಗೆ ಅಹ್ಮದಾಬಾದ್ ತಲುಪಿದ ಬಳಿಕ ಬೆಹ್ರಾಮಪುರದಲ್ಲಿರುವ ವಧು ರಿಂಕುವಿನ ಮನೆಗೆ ತೆರಳಲು 15,000 ರೂ.ಗಳನ್ನು ತೆತ್ತು ಎರಡು ಗಂಟೆೆಗಳ ಮಟ್ಟಿಗೆ ಆನೆಯನ್ನು ಬಾಡಿಗೆಗೆ ಪಡೆದಿದ್ದ. ಮೆರವಣಿಗೆಗಳಲ್ಲಿ ಕುದುರೆಗಳಲ್ಲಿ ಸಾಗುತ್ತಿರುವುದಕ್ಕಾಗಿ ರಸ್ತೆ ತಡೆ ಮತ್ತು ದಾಳಿಯಂತಹ ಘಟನೆಗಳನ್ನು ದಲಿತರು ಎದುರಿಸಬೇಕಾದ ಹಲವಾರು ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಿರುವುದರಿಂದ ಸಂದೇಶವೊಂದನ್ನು ರವಾನಿಸಲು ಏನಾದರೂ ವಿಭಿನ್ನವಾದ್ದನ್ನು ಮಾಡಲು ನಾವು ನಿರ್ಧರಿಸಿದ್ದೆವು ಎಂದು ವರನ ಸಂಬಂಧಿ ಹಾಗೂ ದಲಿತರ ಹಕ್ಕುಗಳ ಕಾರ್ಯಕರ್ತ ಕೀರ್ತಿ ರಾಠೋಡ್ ಹೇಳಿದರು.

ವಿಶಾಲ್ ನ ತಂದೆ ರಮೇಶ ಮಕ್ವಾನಾ ಅವರು ದಕ್ಷಿಣ ಗುಜರಾತಿನ ವಾಪಿ ಜಿಲ್ಲೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದಾರೆ.

ಕಳೆದ ವಾರ ಮೆಹ್ಸಾನಾ ಮತ್ತು ಅರಾವಳಿ ಜಿಲ್ಲೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮದುವೆ ಸಮಾರಂಭದಲ್ಲಿ ವರ ಕುದುರೆ ಸವಾರಿ ಮಾಡಿದ್ದಕ್ಕಾಗಿ ಮೇಲ್ಜಾತಿಗಳ ಸಮುದಾಯದಿಂದ ಬಹಿಷ್ಕಾರ,ರಸ್ತೆತಡೆ ನಡೆದಿದ್ದವು. ಅರಾವಳಿ ಜಿಲ್ಲೆಯಲ್ಲಿ ಇನ್ನೊಂದು ಪ್ರಕರಣದಲ್ಲಿ ಠಾಕೂರ ಸಮುದಾಯದ ವಿರೋಧದಿಂದಾಗಿ ದಲಿತ ವರನ ದಿಬ್ಬಣಕ್ಕೆ ಪೊಲೀಸ್ ರಕ್ಷಣೆಯನ್ನು ಒದಗಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News