ರೇಟಿಂಗ್ ಪಟ್ಟಿಯಲ್ಲಿ ಕುಸಿತ: ರಿಲಯನ್ಸ್ ಕ್ಯಾಪಿಟಲ್ ಪ್ರತಿಭಟನೆ

Update: 2019-05-19 16:42 GMT

ಹೊಸದಿಲ್ಲಿ, ಮೇ.19: ಕೇರ್ ರೇಟಿಂಗ್ಸ್ ಸಂಸ್ಥೆ ಅಂಕಪಟ್ಟಿಯಲ್ಲಿ ಹಿಂಭಡ್ತಿ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಅನಿಲ್ ಅಂಬಾನಿಯ ಆರ್ಥಿಕ ಸೇವಾ ಕಂಪೆನಿ ರಿಲಯನ್ಸ್ ಕ್ಯಾಪಿಟಲ್ ಲಿ. ಪ್ರತಿಭಟನೆ ನಡೆಸಿದೆ.

 ಕೇರ್ ರೇಟಿಂಗ್ಸ್, ರಿಲಯನ್ಸ್ ಕ್ಯಾಪಿಟಲ್‌ನ ದೀರ್ಘಾವಧಿ ಸಾಲ ಕಾರ್ಯಕ್ರಮವನ್ನು ಎ ಪಟ್ಟಿಯಿಂದ ಬಿಬಿಬಿಗೆ ಇಳಿಸಿದೆ ಮತ್ತು ಅಭಿವೃದ್ದಿ ಸೂಚನೆಗಳೊಂದಿಗೆ ಸಾಲದ ನಿಗಾವಣೆಯಲ್ಲಿಟ್ಟಿದೆ ಎಂದು ರಿಲಯನ್ಸ್ ಕ್ಯಾಪಿಟಲ್ ಮತ್ತು ಕೇರ್ ರೇಟಿಂಗ್ಸ್ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ರೇಟಿಂಗ್ಸ್‌ನ ಪರಿಷ್ಕರಣೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿರುವ ಅಂಬಾನಿಯ ಸಂಸ್ಥೆ, ಆಸ್ತಿ ಮಾರಾಟದ ಮೂಲಕ ನೂರು ಬಿಲಿಯನ್ ರೂ. ಸಂಗ್ರಹಿಸುವ ಮತ್ತು ಸದ್ಯದ ವಿತ್ತೀಯ ವರ್ಷದಲ್ಲಿ ತನ್ನ ಒಟ್ಟಾರೆ ಸಾಲವನ್ನು ಅರ್ಧದಷ್ಟು ಕಡಿತಗೊಳಿಸುವ ತನ್ನ ಯೋಜನೆಯನ್ನು ಕೇರ್ ರೇಟಿಂಗ್ಸ್ ಪರಿಗಣಿಸಿಲ್ಲ ಎಂದು ದೂರಿದೆ.

ರಿಲಯನ್ಸ್ ಕ್ಯಾಪಿಟಲ್‌ನ ಅಂಗಸಂಸ್ಥೆಗಳಾದ ರಿಲಯನ್ಸ್ ಗೃಹಸಾಲ ನಿ. ಮತ್ತು ರಿಲಯನ್ಸ್ ವಾಣಿಜ್ಯ ಸಾಲ ನಿ. ಸಾಲ ಬಾಕಿಯಿಟ್ಟಿರುವುದು ಹಾಗೂ ಇತರ ಕಾರಣಗಳಿಂದ ಕಂಪೆನಿಗೆ ಹಿಂಭಡ್ತಿ ನೀಡಿರುವುದಾಗಿ ಕೇರ್ ರೇಟಿಂಗ್ಸ್ ತಿಳಿಸಿದೆ.

ಸದ್ಯ ಆರ್ಥಿಕ ಬಿಕ್ಕಟ್ಟಿನಿಂದ ಸಾಗುತ್ತಿರುವ ಅನಿಲ್ ಅಂಬಾನಿಯ ಉದ್ಯಮಗಳ ಸಾಮ್ರಾಜ್ಯದಲ್ಲಿ ಆರ್ಥಿಕ ಸೇವೆಗಳ ಸಂಸ್ಥೆ ಅಂತಿಮ ನೆಲೆಯಾಗಿದೆ. ತನ್ನ ಉದ್ಯಮಗಳಲ್ಲಿ ಸಾಲ ಬಾಕಿಯಿರಿಸಿದ ಕಾರಣಕ್ಕೆ ಈ ವರ್ಷದ ಆರಂಭದಲ್ಲಿ ಅನಿಲ್ ಅಂಬಾನಿ ಜೈಲು ಪಾಲಾಗಬೇಕಾದ ಪರಿಸ್ಥಿತಿಯೂ ಉದ್ಭವವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News