ಜಾಗತಿಕ ಸ್ಪರ್ಧೆ ಎದುರಿಸಲು ದೇಶಕ್ಕೆ ಬೃಹತ್ ಬ್ಯಾಂಕ್‌ಗಳ ಅಗತ್ಯವಿದೆ: ಸುಬ್ರಮಣಿಯನ್

Update: 2019-05-19 17:04 GMT

 ಹೊಸದಿಲ್ಲಿ, ಮೇ 19: ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಿಲೀನವನ್ನು ಬೆಂಬಲಿಸಿರುವ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ವಿ ಸುಬ್ರಮಣಿಯನ್, ಕೆಲವು ಬೃಹತ್ ಬ್ಯಾಂಕ್‌ಗಳನ್ನು ಹೊಂದಿದ್ದರೆ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯೊಡ್ಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

 ಕೆಲವು ಬೃಹತ್ ಭಾರತೀಯ ಬ್ಯಾಂಕ್‌ಗಳನ್ನು ಹೊಂದುವುದು ಉತ್ತಮ ಯೋಜನೆಯಾಗಿದೆ. ದೇಶದ ಕೆಲವು ಸದೃಢ ಬ್ಯಾಂಕ್‌ಗಳನ್ನು ಇನ್ನಷ್ಟು ಬೆಳೆಯಲು ಪ್ರೋತ್ಸಾಹಿಸಿದರೆ ಅದರಿಂದ ಸಕಾರಾತ್ಮಕ ಫಲಿತಾಂಶ ದೊರಕುತ್ತದೆ. ಸ್ಪರ್ಧಿಸಲು ಸಮರ್ಥವಾಗಿರುವ ಕೆಲವು ಬ್ಯಾಂಕ್‌ಗಳನ್ನು ನಾವು ಹೊಂದಿರಬೇಕು. ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಬ್ಯಾಂಕ್‌ಗಳೊಂದಿಗೆ ಸ್ಪರ್ಧಿಸುವುದರಿಂದ ಬ್ಯಾಂಕ್‌ಗಳ ಸೇವಾ ಗುಣಮಟ್ಟ ವೃದ್ಧಿಸುತ್ತದೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.

 ಜಾಗತಿಕ ಬ್ಯಾಂಕ್‌ಗೆ ವಿಶ್ವದಾದ್ಯಂತ ಉಳಿತಾಯ ಖಾತೆ ಆರಂಭಿಸುವ ಅವಕಾಶವಿರುತ್ತದೆ. ಚೀನಾ ಹಾಗೂ ಯುರೋಪ್‌ನ ಬ್ಯಾಂಕ್‌ಗಳು ಅತ್ಯಂತ ಬೃಹತ್ ಆಗಿರುವುದರಿಂದ ಆರ್ಥಿಕತೆ ಪ್ರಮಾಣದ ಲಾಭ ಪಡೆದು ವೆಚ್ಚ ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ಅಮೆರಿಕ ಹಾಗೂ ಚೀನಾದ ಬ್ಯಾಂಕ್‌ಗಳು ಜಾಗತಿಕ ಉಳಿತಾಯದ ಪ್ರಯೋಜನ ಪಡೆಯುತ್ತವೆ ಎಂದು ಸುಬ್ರಮಣಿಯನ್ ಹೇಳಿದ್ದಾರೆ.

ಭಾರತಕ್ಕೆ ಕೆಲವೇ ಬೃಹತ್ ಬ್ಯಾಂಕ್‌ಗಳ ಅಗತ್ಯವಿದೆ ಎಂದು ವಿತ್ತ ಸಚಿವಾಲಯ ಹೇಳುತ್ತಿದ್ದು ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇನ್ನಷ್ಟು ವಿಲೀನ ಪ್ರಕ್ರಿಯೆಯ ಅಗತ್ಯವನ್ನು ಪ್ರತಿಪಾದಿಸುತ್ತಿದೆ. ಉಳಿತಾಯವನ್ನು ಸೃಷ್ಟಿಸಲು, ಸಹಕ್ರಿಯತೆಯನ್ನು ವೃದ್ಧಿಸಲು ಬ್ಯಾಂಕ್‌ಗಳ ವಿಲೀನಕರಣ ಅಗತ್ಯ ಎಂದು ವಿತ್ತ ಸಚಿವಾಲಯ ಪ್ರತಿಪಾದಿಸಿದೆ.

ಇದರ ಮುಂದುವರಿದ ಪ್ರಕ್ರಿಯೆಯಾಗಿ 2019ರ ಎಪ್ರಿಲ್ 1ರಿಂದ ಅನ್ವಯವಾಗುವಂತೆ ಬ್ಯಾಂಕ್ ಆಫ್ ಬರೋಡಾದೊಂದಿಗೆ ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ವಿಲೀನಗೊಂಡಿದ್ದು ಇದು ಸರಕಾರಿ ಸ್ವಾಮ್ಯದ ಮೂರನೇ ಬೃಹತ್ ಬ್ಯಾಂಕ್ ಎನಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News