ಚಲನಚಿತ್ರ ನಟಿ ರಾಧಿಕಾ ತಂದೆ ನಿಧನ

Update: 2019-05-19 17:06 GMT

ಬಂಟ್ವಾಳ, ಮೇ 19: ಚಲನಚಿತ್ರ ನಟಿ ರಾಧಿಕಾ ಕುಮಾರಸ್ವಾಮಿ ಅವರ ತಂದೆ, ಉದ್ಯಮಿ ದೇವರಾಜ್ (58) ಅವರು ರವಿವಾರ ಬೆಂಗಳೂರು ಸ್ವಗೃಹದಲ್ಲಿ ನಿಧನರಾಗಿದ್ದಾರೆಂದು ಕುಟುಂಬ ಮೂಲಗಳು ತಿಳಿಸಿವೆ.

ಬಂಟ್ವಾಳ ತಾಲೂಕು ಸಾಲೆತ್ತೂರು ಪಾಲ್ತಾಜೆ ನಿವಾಸಿ, ದೇವಪ್ಪ ಯಾನೆ ದೇವರಾಜ್ ಪಾಲ್ತಾಜೆ ಅವರು ಅಲ್ಪಕಾಲದ ಅನಾರೋಗ್ಯದಿಂದ ಬೆಂಗಳೂರಿನ ರಾಜಾಜಿನಗರದ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.

ಕಳೆದ ವಾರ ಇವರ ವಿಟ್ಲ ಸಮೀಪದ ಸಾಲೆತ್ತೂರು ಮನೆಯಲ್ಲಿ ದೈವಗಳ ನೇಮ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆದಿತ್ತು. ಆ ಬಳಿಕ ಇವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಹಾಗಾಗಿ ಇವರನ್ನು ಬೆಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.

ದೇವರಾಜ್ ಅವರು ಮೂಲತಃ ಮಂಗಳೂರಿನವರು. ಬಳಿಕ ಉದ್ಯಮ ಕ್ಷೇತ್ರದಲ್ಲಿ ಬೇರೆ ಬೇರೆ ಕಡೆಗಳಿಗೆ ಪ್ರವಾಸ ಕೈಗೊಂಡು ವಿಟ್ಲ ಸಮೀಪದ ಸಾಲೆತ್ತೂರು ಎಂಬಲ್ಲಿ ವಾಸ ಮಾಡುತ್ತಿದ್ದರು. ಮೃತರು ಪತ್ನಿ, ಪುತ್ರಿ ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಪುತ್ರ ರವಿರಾಜ್ ಅವರನ್ನು ಅಗಲಿದ್ದಾರೆ. ಅಮ್ಟೂರು ಹಾಗೂ ಸಾಲೆತ್ತೂರಿನಲ್ಲಿ ಅವರಿಗೆ ಕೃಷಿ ಜಮೀನಿದ್ದು, ಸಾಲೆತ್ತೂರಿನ ಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News