ಅರಬ್ಬಿ ಸಮುದ್ರದಲ್ಲಿ ತೈಲ ನಿಕ್ಷೇಪದ ಪಾಕ್ ಕನಸು ನುಚ್ಚುನೂರು

Update: 2019-05-19 17:46 GMT

ಕರಾಚಿ (ಪಾಕಿಸ್ತಾನ), ಮೇ 19: ಕರಾಚಿಗೆ ಹೊಂದಿಕೊಂಡಿರುವ ಅರಬ್ಬಿ ಸಮುದ್ರದಲ್ಲಿ ತೈಲ ನಿಕ್ಷೇಪವಿದೆ ಎಂಬ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ರ ಕನಸು ನುಚ್ಚು ನೂರಾಗಿದೆ.

ಅರಬ್ಬಿ ಸಮುದ್ರದಲ್ಲಿ ಭಾರೀ ಪ್ರಮಾಣದಲ್ಲಿ ತೈಲ ನಿಕ್ಷೇಪ ಪತ್ತೆಯಾಗಿದ್ದು, ತೈಲದ ಆಮದನ್ನು ನಿಲ್ಲಿಸುವ ಮೂಲಕ ಪಾಕಿಸ್ತಾನ ಆರ್ಥಿಕ ಪ್ರಗತಿ ಸಾಧಿಸಬಹುದು ಎಂಬುದಾಗಿ ಮಾರ್ಚ್‌ನಲ್ಲಿ ಇಮ್ರಾನ್ ಖಾನ್ ಹೇಳಿದ್ದರು.

ಆದರೆ, ಕರಾಚಿ ಸಮೀಪದ ಆಳ ಸಮುದ್ರದಲ್ಲಿರುವ ‘ಕೇಕ್ರ-1’ ಬಾವಿಯಲ್ಲಿ ಯಾವುದೇ ತೈಲ ಅಥವಾ ಅನಿಲ ನಿಕ್ಷೇಪ ಪತ್ತೆಯಾಗದ ಹಿನ್ನೆಲೆಯಲ್ಲಿ ಬಾವಿ ಕೊರೆಯುವ ಕೆಲಸವನ್ನು ನಿಲ್ಲಿಸಲಾಗಿದೆ ಎಂದು ಮಾಧ್ಯಮ ವರದಿಗಳು ರವಿವಾರ ವರದಿ ಮಾಡಿವೆ.

ಅಮೆರಿಕದ ತೈಲ ದೈತ್ಯ ಎಕ್ಸಾನ್ ಮೊಬೈಲ್ ಮತ್ತು ಇಟಲಿಯ ಇಎನ್‌ಐ ಹಾಗೂ ಇತರ ಎರಡು ಕಂಪೆನಿಗಳು ಸಮುದ್ರದಲ್ಲಿ ಬಾವಿ ಕೊರೆಯುವ ಕೆಲಸದಲ್ಲಿ ತೊಡಗಿದ್ದವು.

5,500 ಮೀಟರ್‌ಗೂ ಅಧಿಕ ಆಳದ ಬಾವಿಯನ್ನು ತೋಡುವ ಕೆಲಸ ಪೂರ್ಣಗೊಂಡಿದೆ ಎಂದು ಪ್ರಧಾನಿ ಇಮ್ರಾನ್ ಖಾನ್‌ರ ಪೆಟ್ರೋಲಿಯಂ ಕುರಿತ ವಿಶೇಷ ಸಲಹೆಗಾರ ನದೀಮ್ ಬಾಬರ್ ಹೇಳಿರುವುದಾಗಿ ‘ಜಿಯೋ ನ್ಯೂಸ್’ ವರದಿ ಮಾಡಿದೆ.

ಬಾವಿ ತೋಡುವುದಕ್ಕೆ 100 ಮಿಲಿಯ ಡಾಲರ್ (ಸುಮಾರು 703 ಕೋಟಿ ಭಾರತೀಯ ರೂಪಾಯಿ)ಗೂ ಅಧಿಕ ಮೊತ್ತವನ್ನು ವ್ಯಯಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News