​ಸರ್ಕಾರಕ್ಕೆ ಹಕ್ಕುಮಂಡನೆ: ವಿರೋಧ ಪಕ್ಷಗಳ ಕಾರ್ಯತಂತ್ರ ಏನು ಗೊತ್ತೇ ?

Update: 2019-05-20 05:39 GMT
ಚಂದ್ರಬಾಬು ನಾಯ್ಡು

ಹೊಸದಿಲ್ಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಕೂಟಕ್ಕೆ ಮತ್ತೊಮ್ಮೆ ನಿಚ್ಚಳ ಬಹುಮತ ದೊರಕಲಿದೆ ಎಂದು ಮತಗಟ್ಟೆ ನಿರ್ಗಮನ ಸಮೀಕ್ಷೆಗಳು ಅಂದಾಜಿಸಿದ್ದರೂ, ಮೇ 23ರಂದು ಫಲಿತಾಂಶ ಪ್ರಕಟವಾದ ತಕ್ಷಣ ಪರ್ಯಾಯ ಸರ್ಕಾರ ರಚನೆಗೆ ಬದ್ಧವಾಗಿರುವ ಪಕ್ಷಗಳ ಪಟ್ಟಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಲು ವಿರೋಧ ಪಕ್ಷಗಳ ಒಂದು ಗುಂಪು ಯೋಜನೆ ರೂಪಿಸಿದೆ.

ಈ ಸಂಬಂಧ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ವಿರೋಧ ಪಕ್ಷಗಳ ಮುಖಂಡರು ಹೇಳಿದ್ದಾರೆ.

ಒಂದು ವೇಳೆ ಅತಂತ್ರ ಸಂಸತ್ ನಿರ್ಮಾಣವಾದಲ್ಲಿ, ರಾಷ್ಟ್ರಪತಿಗಳು ವಿರೋಧ ಪಕ್ಷಗಳ ಮೈತ್ರಿಕೂಟವನ್ನು ಸರ್ಕಾರ ರಚನೆಗೆ ಮೊದಲು ಆಹ್ವಾನಿಸಬೇಕಾಗುತ್ತದೆ ಎನ್ನುವುದು ಈ ನಡೆಯ ಹಿಂದಿನ ಉದ್ದೇಶ.

ರಾಷ್ಟ್ರಪತಿಗಳಿಗೆ ಮೊದಲೇ ಪರ್ಯಾಯ ಕೂಟದ ಪಟ್ಟಿಯನ್ನು ಸಲ್ಲಿಸದಿದ್ದರೆ, ಎನ್‌ಡಿಎ ಮಿತ್ರಪಕ್ಷಗಳ ಜತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೆ ಸರ್ಕಾರ ರಚನೆ ಆಹ್ವಾನ ಮೊದಲು ದೊರಕುತ್ತದೆ ಎನ್ನುವುದು ನಾಯ್ಡು ಅವರ ಲೆಕ್ಕಾಚಾರವಾಗಿದ್ದು, ಈ ಅಂಶವನ್ನು ವಿರೋಧ ಪಕ್ಷಗಳ ಮುಖಂಡರಿಗೆ ಮನದಟ್ಟು ಮಾಡಿದ್ದಾರೆ ಎಂದು ಹೇಳಲಾಗಿದೆ.

"ಬಿಜೆಪಿಗೆ 200ಕ್ಕಿಂತ ಕಡಿಮೆ ಸ್ಥಾನಗಳು ದೊರಕಲಿವೆ ಎನ್ನುವುದು ನಾಯ್ಡು ಅವರ ಲೆಕ್ಕಾಚಾರ. ಹೀಗಾದಲ್ಲಿ ಎನ್‌ಡಿಎ ಹಾಗೂ ಇತರ ಪಕ್ಷಗಳ ನಡುವಿನ ಅಂತರ ತೀರಾ ಕಡಿಮೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ರಚಿಸಲು ಆಸಕ್ತಿ ವ್ಯಕ್ತಪಡಿಸುವ ಪತ್ರವನ್ನು ಎಲ್ಲ ಪಕ್ಷಗಳ ಮುಖಂಡರ ಸಹಿಯೊಂದಿಗೆ ಮೊದಲೇ ರಾಷ್ಟ್ರಪತಿಗಳಿಗೆ ನೀಡದಿದ್ದರೆ, ಛಿದ್ರವಾಗಿರುವ ವಿರೋಧ ಪಕ್ಷಗಳಿಗೆ ಸರ್ಕಾರ ರಚನೆಗೆ ಅವಕಾಶ ದೊರೆಯುವ ಸಾಧ್ಯತೆ ಇಲ್ಲ" ಎಂದು ವಿರೋಧ ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News