ಕೈಯಿಂದ ತಳ್ಳುವ ವಾಹನದಲ್ಲಿ ಆಹಾರ ಡೆಲಿವರಿ: ಝೊಮ್ಯಾಟೊದ ‘ವಿಶೇಷ’ ಡೆಲಿವರಿ ಬಾಯ್ ಗೆ ವ್ಯಾಪಕ ಪ್ರಶಂಸೆ

Update: 2019-05-20 10:06 GMT

ಹೊಸದಿಲ್ಲಿ, ಮೇ 20: ಆನ್‍ಲೈನ್ ಫುಡ್ ಡೆಲಿವರಿ ಕಂಪೆನಿಯಾಗಿರುವ ‘ಝೊಮ್ಯಾಟೊ’ದಲ್ಲಿ ವಿಕಲಚೇತನ ವ್ಯಕ್ತಿಯೊಬ್ಬರು ಆಹಾರ ಡೆಲಿವರಿ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇವರು ಜೀವನದಲ್ಲಿ ಕಠಿಣ ಪರಿಶ್ರಮ ವಹಿಸಲು ಹಲವು ಮಂದಿಗೆ ಸ್ಫೂರ್ತಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ. ರಾಮು ಎಂಬ ಝೊಮ್ಯಾಟೊ ಉದ್ಯೋಗಿ ವಿಕಲ ಚೇತನರಾಗಿದ್ದರೂ ತಮ್ಮ ಕೈಯಿಂದ ತಳ್ಳುವ ತ್ರಿಚಕ್ರ ವಾಹನದ ಮೂಲಕ ಆಹಾರ ಡೆಲಿವರಿ ಮಾಡುವ ಮೂಲಕ ಎಲ್ಲರಿಗೆ ಸ್ಫೂರ್ತಿಯಾಗಿದ್ದಾರೆ.

ರಾಮು ಅವರಿಗೆ ಗೌರವಯುತ ಜೀವನಕ್ಕೆ ಅವಕಾಶ ಮಾಡಿಕೊಟ್ಟ ಝೊಮ್ಯಾಟೋ ಬಗ್ಗೆಯೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಟ್ವಿಟರ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮಂದಿ ರಾಮು ಅವರ ಛಲವನ್ನು ಪ್ರಶಂಸಿಸಿದ್ದಾರೆ. “ಈ ಅನಾಮಧೇಯ ಸ್ನೇಹಿತನಿಗೆ ಸೆಲ್ಯೂಟ್ ಹೇಳಬೇಕು. ಇದನ್ನು ಬದ್ಧತೆ ಎನ್ನುತ್ತಾರೆ” ಎಂದು ಟ್ವಿಟರ್ ಬಳಕೆದಾರರೊಬ್ಬರು ಹೊಗಳಿದ್ದಾರೆ. ಸಾಧನೆ ಮಾಡಬೇಕು ಎಂಬ ಛಲದಿಂದ ಜನ ಎಷ್ಟು ಕಷ್ಟ ಪಡುತ್ತಾರೆ ಎನ್ನುವುದನ್ನು ಈ ವಿಡಿಯೊ ಬಿಂಬಿಸುತ್ತದೆ ಎಂದು ಮತ್ತೊಬ್ಬ ಬಳಕೆದಾರರು ವಿಡಿಯೊ ಮರುಟ್ವೀಟ್ ಮಾಡಿದ್ದಾರೆ.

“ನಾವು ಹಲವು ಅಂಶಗಳನ್ನು ಕಡೆಗಣಿಸುತ್ತೇವೆ. ಆದರೆ ಇದು ಎಂದೂ ಮರೆಯಲಾಗದ ಪಾಠ” ಎಂದು ಕೆನೆತ್ ಉದಯ್‍ ರಾಜ್ ಎಂಬುವವರು ಬಣ್ಣಿಸಿದ್ದಾರೆ. "ಪ್ರೇರಣೆ, ಸ್ಫೂರ್ತಿ, ಗೌರವ!!" ಎಂದು ಮತ್ತೊಬ್ಬ ಬಳಕೆದಾರರು ಉದ್ಗರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News