ಉಡುಪಿ: ಪಿಯು ತರಗತಿ ಆರಂಭಕ್ಕೆ ಅಡ್ಡಿಯಾದ ನೀರಿನ ಅಭಾವ

Update: 2019-05-20 16:27 GMT

ಉಡುಪಿ, ಮೇ 20: ನಗರವನ್ನು ಕಾಡುತ್ತಿರುವ ನೀರಿನ ಕೊರತೆಯ ಬಿಸಿ ಈಗ ಶಿಕ್ಷಣ ಸಂಸ್ಥೆಗಳಿಗೂ ತಟ್ಟಿದ್ದು, ಇದರ ಪರಿಣಾಮವಾಗಿ ಉಡುಪಿಯ ಖಾಸಗಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಆರಂಭವಾಗಬೇಕಾಗಿದ್ದ ತರಗತಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

‘ಕಾಲೇಜಿನಲ್ಲಿ ನೀರಿನ ಅಭಾವ ಎದುರಾಗಿರುವುದರಿಂದ ಮೇ 20ರಂದು ಆರಂಭವಾಗಬೇಕಾಗಿದ್ದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಯನ್ನು ಜೂ.1ಕ್ಕೆ ಮುಂದೂಡಲಾಗಿದೆ’ ಎಂಬುದಾಗಿ ಉಡುಪಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಆ್ಯಪ್ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ರವಾನಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಲೇಜಿನ ಪ್ರಾಂಶುಪಾಲ ಸಂದೀಪ್, ‘ನೀರಿನ ಕೊರತೆಯಿಂದ ಕಾಲೇಜು ಆರಂಭಿಸಲು ಕಷ್ಟ ಆಗುತ್ತಿದೆ. ನಮ್ಮ ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿಯಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳಿದ್ದಾರೆ. ಸದ್ಯ ಇಂದು ಹಾಜರಾತಿ ಪಡೆದು ಮಕ್ಕಳನ್ನು ಮನೆಗೆ ಕಳುಹಿಸಿದ್ದೇವೆ. ಮುಂದೆ ಮಧ್ಯಾಹ್ನದವರೆಗೆ ತರಗತಿ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಮಳೆ ಬಂದರೆ ಪೂರ್ಣ ತರಗತಿಯನ್ನು ಆರಂಭಿಸಲಾಗುತ್ತೆ’ ಎಂದು ಪತ್ರಿಕೆಗೆ ತಿಳಿಸಿದ್ದಾರೆ.

‘ನೀರಿನ ಕೊರತೆ ಕಾರಣಕ್ಕೆ ನಾವು ಯಾವುದೇ ಕಾಲೇಜುಗಳ ತರಗತಿಯನ್ನು ಮುಂದೂಡುವಂತೆ ಸೂಚಿಲ್ಲ. ಅದಕ್ಕೆ ಇಲಾಖೆ ಮಟ್ಟದಲ್ಲೇ ಆದೇಶ ಬರಬೇಕಾ ಗಿದೆ. ಹೆಚ್ಚಿನ ಕಾಲೇಜುಗಳಲ್ಲಿ ಯಾವುದೇ ನೀರಿನ ಸಮಸ್ಯೆ ಇಲ್ಲ. ಕೆಲವೊಂದು ಕಾಲೇಜುಗಳಲ್ಲಿ ಸಮಸ್ಯೆ ಇರಬಹುದು. ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಳ್ಳುವಂತೆ ಸೂಚಿಸಲಾಗಿದೆ’

-ಸುಬ್ರಹ್ಮಣ್ಯ ಜೋಶಿ, ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News