ನಗರಸಭೆ ಹಲವೆಡೆ ನೀರಿಗಾಗಿ ದೂರು: ಟ್ಯಾಂಕರ್‌ನಲ್ಲಿ ಪೂರೈಕೆ

Update: 2019-05-20 16:32 GMT

ಉಡುಪಿ, ಮೇ 20:ಉಡುಪಿ ನಗರಸಭೆಯ ಒಂದನೆ ವಿಭಾಗದ ವಾರ್ಡ್‌ಗಳಿಗೆ ಇಂದು ನೀರು ಪೂರೈಕೆ ಮಾಡಲಾಗಿದ್ದು, ನೀರು ಬಾರದ ಕುರಿತು ಒಟ್ಟು 12 ದೂರುಗಳು ಸಲ್ಲಿಕೆಯಾಗಿವೆ.

ಮಣಿಪಾಲ-2, ಕಡಿಯಾಳಿ-1, ಇಂದ್ರಾಳಿ-5, ಕೊಡಂಕೂರು- 2, ಈಶ್ವರನಗರ-1, ಇತರ-1 ಸೇರಿದಂತೆ ಒಟ್ಟು 12 ದೂರುಗಳು ಬಂದಿದ್ದು, ಈ ಎಲ್ಲ ಕಡೆಗಳಿಗೂ ಟ್ಯಾಂಕರ್ ನೀರು ಸರಬರಾಜು ಮಾಡಲಾಗಿದೆ. ಅಲ್ಲದೆ ನಿಟ್ಟೂರು, ಗುಂಡಿಬೈಲು, ಮೂಡುಪೆರಂಪಳ್ಳಿಗಳಿಗೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿದೆ.

ಸದ್ಯ ಬಜೆಯಲ್ಲಿ ನೀರಿಗೆ ಯಾವುದೇ ಕೊರತೆ ಇಲ್ಲ. ನಿರಂತರ ಪಂಪಿಂಗ್ ಕಾರ್ಯ ನಡೆಯುತ್ತಿದ್ದು, ಜೂನ್ ಮೊದಲ ವಾರದವರೆಗೆ ಬೇಕಾದಷ್ಟು ನೀರಿನ ಸಂಗ್ರಹ ಇದೆ. ಈಗ ಸ್ವರ್ಣ ನದಿಯ ಮಾಣೈ ಸೇತುವೆ ಬಳಿ ಮಾತ್ರ ಡೆಡ್ಜಿಂಗ್ ಕಾರ್ಯ ಮುಂದುವರೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ನೀರು ಪೂರೈಕೆ: ಉಡುಪಿ ನಗರಸಭೆ ವ್ಯಾಪ್ತಿಯ ದೊಡ್ಡಣಗುಡ್ಡೆ, ಕರಂಬಳ್ಳಿ, ಜನತಾ ಕಾಲೋನಿ, ನೇಕಾರರ ಕಾಲೋನಿ, ವಿ.ಎಂ.ನಗರ ರೈಲ್ವೆ ಸೇತುವೆವರೆಗೆ, ಪೊಲೀಸ್ ವಸತಿಗೃಹ, ಚಕ್ರತೀರ್ಥ, ಪಾಡಿಗಾರು ಮಠ, ಗುಂಡಿಬೈಲು ಶಾಲಾ ವಠಾರ, ಕಲ್ಸಂಕ ಗುಂಡಿಬೈಲು ರೋಡ್, ಅಡ್ಕದಕಟ್ಟೆ, ನಿಟ್ಟೂರು, ವಿಷ್ಣುಮೂರ್ತಿ ನಗರ, ಕಡಿಯಾಳಿ, ಕೆಇಬಿ ವಸತಿಗೃಹ, ಕಾತ್ಯಾಯಿನಿ ನಗರ, ಎಂಜಿಎಂ ವಸತಿಗೃಹ, ಸಗ್ರಿ ರೈಲ್ವೆ ಸೇತುವೆವರೆಗೆ, ಗೋಪಾಲಪುರ, ನಯಂಪಳ್ಳಿ, ಸಂತೆಕಟ್ಟೆ, ಸುಬ್ರಹ್ಮಣ್ಯ ನಗರ, ಅಂಬಾಗಿಲು, ಕಕ್ಕುಂಜೆ, ಪ್ರಭಾಕರ್ ಲೇಔಟ್, ಕುದುರೆ ಕಲ್ಸಂಕದ ವರೆಗೆ, ನಿಟ್ಟೂರು ಶಾಲೆ ಬಳಿ, ಹನುಮಂತ ನಗರಗಳಿಗೆ ಮೇ 21ರಂದು ನೀರು ಸರಬರಾಜು ಮಾಡಲಾಗುವುದು ಎಂದು ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರಸಭೆಯ ಬಾವಿ ದುರಸ್ತಿಗೆ ಆಗ್ರಹ

ಪರ್ಕಳದಲ್ಲಿರುವ ಉಡುಪಿ ನಗರಸಭೆ ಉಪಕಚೇರಿಯ ಆವರಣದಲ್ಲಿರುವ ಬಾವಿಯನ್ನು ಸ್ವಚ್ಛಗೊಳಿಸಿ ಸಮೀಪದಲ್ಲೇ ಇರುವ ನಗರಸಭೆ ಕಚೇರಿ, ಅಂಗನ ವಾಡಿ ಕೇಂದ್ರ ಹಾಗೂ ನಗರಸಭೆ ಸೇರಿದ ಕಟ್ಟಡದ ಬಾಡಿಗೆ ಅಂಗಡಿಗಳಿಗೆ ಶುದ್ಧವಾದ ಕುಡಿಯುವ ನೀಡು ಪೂರೈಕೆ ಮಾಡಬಹು ದಾಗಿದೆ. ಆದುದರಿಂದ ಅಧಿಕಾರಿಗಳು ಕೂಡಲೇ ಇಲ್ಲಿನ ಬಾವಿಯನ್ನು ಶುಚಿಗೊಳಿಸಿ ಅದರ ನೀರು ಬಳಸುವಂತೆ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ರಾಜೇಶ್ ಪ್ರಭು ಪರ್ಕಳ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News