2023ಕ್ಕೆ ಹಿಂದೂ ರಾಷ್ಟ್ರ ನಿರ್ಮಾಣದ ಸಂಕಲ್ಪ: ಕರಿಂಜೆ ಸ್ವಾಮೀಜಿ

Update: 2019-05-20 16:35 GMT

ಉಡುಪಿ, ಮೇ 20: ಹಿಂದೂ ರಾಷ್ಟ್ರ ಶಾಂತಿಯ ಸಂಕೇತವಾಗಿದ್ದು, 2023ಕ್ಕೆ ಹಿಂದೂ ರಾಷ್ಟ್ರ ನಿರ್ಮಾಣದ ಸಂಕಲ್ಪಮಾಡಲಾಗಿದೆ. ಇದಕ್ಕೆ ಎಲ್ಲ ಮತ, ಪಂಥದವರು ಸಹಕಾರ ನೀಡಬೇಕು. ಹಿಂದೂ ರಾಷ್ಟ್ರ ನಿರ್ಮಾಣದಿಂದ ಯಾರಿಗೂ ತೊಂದರೆ ಆಗಲ್ಲ ಎಂದು ಕರಿಂಜೆ ಮಠದ ಮುಕ್ತಾನಂದ ಸ್ವಾಮೀಜಿ ಹೇಳಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪರಾತ್ಪರ ಗುರು ಜಯಂತ ಆಠವಲೆ ಅವರ ಜಯಂತಿ ಪ್ರಯುಕ್ತ ಅಜ್ಜರಕಾಡಿನಲ್ಲಿ ಸೋಮವಾರ ನಡೆದ ಹಿಂದೂ ಐಕ್ಯತಾ ಕಾರ್ಯಕ್ರವುದಲ್ಲಿ ಅವರು ಮಾತನಾಡುತ್ತಿದ್ದರು.

ಭಾರತವನ್ನು ಜಗದ್ಗುರು ಮಾಡಲು ಭಯೋತ್ಪಾದನೆ, ಮತಾಂತರ, ಗೋ ಹತ್ಯೆ, ಲವ್ ಜಿಹಾದ್‌ಗಳು ಅಡ್ಡಿಯಾಗಿವೆ. ಹಿಂದೂ ರಾಷ್ಟ್ರ ನಿರ್ಮಾಣದಿಂದ ಮಾತ್ರ ಇದಕ್ಕೆಲ್ಲ ಕಡಿವಾಣ ಹಾಕಲು ಸಾಧ್ಯ. ಭಾರತ ದೇಶದ ಬಡ ಹಿಂದೂ ಗಳಿಗೆ ಸದ್ಯ ಹಣದ ಆಮಿಷಗಳನ್ನೊಡ್ಡಿ ಮತಾಂತರ ಮಾಡಲಾಗುತ್ತಿದೆ. ಇದನ್ನು ನಾವು ಮೆಟ್ಟಿ ನಿಲ್ಲಬೇಕಾದರೆ ಹಿಂದೂ ರಾಷ್ಟ್ರದ ನಿರ್ಮಾಣ ಆಗಬೇಕು ಎಂದರು.

ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರ ವಿಜಯಕುಮಾರ್ ಮಾತನಾಡಿ, ಭಾರತ ವ್ಯವಸ್ಥಿತ ರಾಷ್ಟ್ರವಾಗಬೇಕಾದರೆ 2023ರೊಳಗೆ ಹಿಂದೂ ರಾಷ್ಟ್ರ ನಿರ್ಮಾಣ ಆಗಬೇಕು. ಅದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.

ವೇದಿಕೆಯಲ್ಲಿ ಡಾ.ಶ್ರೀಕಲಾ ಜೋಶಿ ಉಪಸ್ಥಿತರಿದ್ದರು. ಇದಕ್ಕೂ ಮುನ್ನಾ ನಗರದ ಸರ್ವಿಸ್ ಬಸ್ ನಿಲ್ದಾಣದಿಂದ ಅಜ್ಜರಕಾಡಿನ ಭುಜಂಗ್ ಪಾರ್ಕ್ ವರೆಗೆ ಹಿಂದೂ ಐಕ್ಯತಾ ಮೆರವಣಿಗೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News