ಅಂ.ರಾ.ಗಣಿತ ಸಮ್ಮೇಳನ: ಮಾಧವಕೃಪಾ ಶಾಲೆಯ ಶಿಕ್ಷಕಿಗೆ ಪ್ರಥಮ ಬಹುಮಾನ
Update: 2019-05-20 22:11 IST
ಉಡುಪಿ, ಮೇ 20: ಫಿಲಿಪ್ಪೈನ್ಸ್‌ನ ಡುಮಗೂಟೆ ನಗರದ ಸೈಂಟ್‌ಪಾಲ್ ವಿವಿಯಲ್ಲಿ ಬೇಸಿಕ್ ಎಜ್ಯುಕೇಷನ್ ಮ್ಯಾತ್‌ಟೀಚರ್ಸ್ ಸೊಸೈಟಿ ವತಿಯಿಂದ ಮೂರು ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಗಣಿತ ಶಿಕ್ಷಣ ಸಮ್ಮೇಳನದಲ್ಲಿ ಭಾಗವಹಿಸಿದ ಮಣಿಪಾಲ ಮಾಧವಕೃಪಾ ಶಾಲೆಯ ಶಿಕ್ಷಕಿ ಶೈಲಜಾ ಬಾಯರಿ ಅವರು ಮಂಡಿಸಿದ ಸಂಶೋಧನಾ ಪ್ರಬಂಧ ಹಾಗೂ ಪೋಸ್ಟರ್ ಪ್ರಾತ್ಯಕ್ಷಿಕೆ ಪ್ರಥಮ ಬಹುಮಾನವನ್ನು ಗೆದ್ದುಕೊಂಡಿದೆ.
ಅದೇ ಸಮ್ಮೇಳನದಲ್ಲಿ ಮಾಧವಕೃಪಾ ಶಾಲೆಯ 12ನೇ ತರಗತಿ ವಿದ್ಯಾರ್ಥಿನಿ ಮೈತ್ರಿ ಎಂ.ಬಾಯರಿ ಮಂಡಿಸಿದ ಪ್ರಬಂಧ ಹಾಗೂ ಪೋಸ್ಟರ್ ನೆರೆದ ವಿಶ್ವ ಮಟ್ಟದ ಗಣಿತಜ್ಞರ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಮ್ಮೇಳನದಲ್ಲಿ ಭಾರತ, ಆಸ್ಟ್ರೇಲಿಯಾ ಮಲೇಷಿಯಾ, ವಿಯೆಟ್ನಾಂ, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಮಾರಿಷಸ್ ಹಾಗೂ ಫಿಲಿಪ್ಪೈನ್ಸ್‌ನ 90ಕ್ಕೂ ಅಧಿಕ ನೊಂದಾಯಿತ ಗಣಿತಜ್ಞರು ಹಾಗೂ ಗಣಿತ ಆಸಕ್ತರು ಭಾಗವಹಿಸಿದ್ದರು ಎಂದು ಮಾಧವಕೃಪಾ ಶಾಲೆಯ ಪ್ರಕಟಣೆ ತಿಳಿಸಿದೆ.