ಮಹಿಳೆಗೆ 2 ವರ್ಷ ಲೈಂಗಿಕ ಕಿರುಕುಳ: ಬಿಜೆಪಿ ನಾಯಕನ ಬಂಧನ

Update: 2019-05-20 17:02 GMT

ರಾಯ್‌ಪುರ್, ಮೇ.20: ಛತ್ತೀಸ್ಗಡದ ರಾಯ್‌ಪುರ್ ನಿವಾಸಿ 34ರ ಹರೆಯದ ಮಹಿಳೆಗೆ ಎರಡು ವರ್ಷಗಳ ಕಾಲ ನಿರಂತರ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸರು ಸ್ಥಳೀಯ ಬಿಜೆಪಿ ನಾಯಕನನ್ನು ರವಿವಾರ ಬಂಧಿಸಿದ್ದಾರೆ. ಮಹಿಳೆ ಇಲ್ಲಿನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಸ್ಥಳೀಯ ಬಿಜೆಪಿ ನಾಯಕ 42ರ ಹರೆಯದ ಪ್ರಕಾಶ್ ಬಜಾಜ್ ಎಂಬವರನ್ನು ಬಂಧಿಸಿದ್ದಾರೆ.

ಪೊಲೀಸರಿಗೆ ನೀಡಿದ ದೂರಿನಲ್ಲಿ, “ನಾನು ಪ್ರಕಾಶ್ ಬಜಾಜ್ ಮೂಲಕ ಮನೆ ಖರೀದಿಸಲೆಂದು ಅವರಿಗೆ 10 ಲಕ್ಷ ರೂ. ನೀಡಿದ್ದೆ ಮತ್ತು ಉಳಿದ ಮೊತ್ತಕ್ಕಾಗಿ ಬ್ಯಾಂಕ್ ಸಾಲದ ಮೂಲಕ ವ್ಯವಸ್ಥೆ ಮಾಡುತ್ತಿದ್ದೆ. ಆದರೆ ನನಗೆ ಬ್ಯಾಂಕ್ ಸಾಲ ಸಿಗದೆ ಇದ್ದಾಗ ನನ್ನ ಹಣ ವಾಪಸ್ ನೀಡುವಂತೆ ಬಜಾಜ್ ಅವರಿಗೆ ತಿಳಿಸಿದ್ದೆ. ಆದರೆ ಹಣ ವಾಪಸ್ ನೀಡುವ ನೆಪದಲ್ಲಿ ಆರೋಪಿ 2016ರಿಂದ 2018ರ ಮಧ್ಯೆ ಹಲವು ಬಾರಿ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ” ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಪ್ರಕಾಶ್ ಬಜಾಜ್ ನನ್ನ ಹಣವನ್ನು ವಾಪಸ್ ನೀಡಿಲ್ಲ ಮತ್ತು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಅಥವಾ ಇತರರಿಗೆ ತಿಳಿಸಿದರೆ ಪರಿಣಾಮ ಎದುರಿಸಬೇಕಾದೀತು ಎಂದು ಬೆದರಿಕೆಯೊಡ್ಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಬಿಜೆಪಿ ನಾಯಕನ ವಿರುದ್ಧ ಭಾರತೀಯ ದಂಡಸಂಹಿತೆಯ 354 ಮತ್ತು 506ನೇ ವಿಧಿಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಹದಿನೈದು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News