ಮತ್ತಷ್ಟು ಸೌಲಭ್ಯದೊಂದಿಗೆ ಮಾದರಿ ಮೂಡುಬಿದಿರೆ ಪುರಸಭೆ : ಸಚಿವ ಯು.ಟಿ ಖಾದರ್

Update: 2019-05-20 17:08 GMT

ಮೂಡುಬಿದಿರೆ : ಬಿಜೆಪಿಯವರ ಅಪಪ್ರಚಾರ, ಸುಳ್ಳು ಭರವಸೆ ಕಿವಿಗೊಡದೆ, ಒತ್ತಡಕ್ಕೆ ಮತದಾರರು ಮಣಿಯದೆ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸುತ್ತಾರೆ ಎನ್ನುವ ಭರವಸೆ ಇದೆ. ಕಳೆದ ಬಾರಿ ಕಲಂಕರಹಿತವಾಗಿ ಕಾಂಗ್ರೆಸ್ ನೀಡಿದ ಆಡಳಿತದಿಂದ ಜನರ ಒಲವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಕಡೆಗಿದೆ. ಮತ್ತಷ್ಟು ಸೌಲಭ್ಯಗಳನ್ನು ಇಲ್ಲಿಗೆ ನೀಡಿ ಮಾದರಿ ಪುರಸಭೆ ಮಾಡುತ್ತೇವೆ ಎಂದು ರಾಜ್ಯ ಸಚಿವ ಯು.ಟಿ ಖಾದರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅವರು ಮೂಡುಬಿದಿರೆ ಪ್ರೆಸ್‍ಕ್ಲಬ್‍ನಲ್ಲಿ ಸೋಮವಾರ ಮಾತನಾಡಿದರು. ಮೂಲಭೂತ ಸೌಕರ್ಯ ಒದಗಿಸುವಲ್ಲಿ, ಭವಿಷ್ಯದ ಮೂಡುಬಿದಿರೆ ನಿರ್ಮಾಣ  ಮಾಡುವಲ್ಲಿ ಇಲ್ಲಿನ ಪುರಸಭೆ ನಂ.1 ಸ್ಥಾನದಲ್ಲಿದೆ. ಸೋಮವಾರ ಪುರಸಭೆಯ 22 ವಾರ್ಡ್‍ಗಳ ಅಭ್ಯರ್ಥಿಗಳ ಜೊತೆ ಸಮಾಲೋಚನೆ ನಡೆಸಿದ್ದೇನೆ ಎಂದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು ಮೈತ್ರಿ ಸರಕಾರ ಭದ್ರವಾಗಿದೆ. ಯಾವುದೇ ಗೊಂದಲಗಳಿಲ್ಲ. ನೀತಿ ಸಂಹಿತೆ ಮುಗಿದ ಕೂಡಲೇ ನನ್ನ ಮೊದಲ ಆದ್ಯತೆಯಾಗಿ ನಿವೇಶನ ಸಮಸ್ಯೆಯನ್ನು ಅಂತ್ಯಗೊಳಿಸುವುದಾಗಿ ಭರವಸೆ ನೀಡಿದರು. ಮೂಡುಬಿದಿರೆ ಯು.ಜಿ.ಡಿ ವಿಚಾರ ಪ್ರಸ್ತಾವನೆ ಹಂತದಲ್ಲಿ ಸರ್ಕಾರ ಮಟ್ಟದಲ್ಲಿ ಕೆಲಸ ಮಾಡಲಾಗುವುದು ಎಂದ ಅವರು ಫಲಿತಾಂಶದ ಮೊದಲು ಮಾಧ್ಯಮಗಳು ನಡೆಸಿದ ಸಮೀಕ್ಷೆ ಎನ್‍ಡಿಎ ಪರವಾಗಿರುವುದು ನಿಜ. ಆದರೆ ಈ ಹಿಂದೆ ನಡೆದ ಸಮೀಕ್ಷೆಗಳು ಕೂಡ ಕೆಲವು ಸಂದರ್ಭದಲ್ಲಿ ಸತ್ಯವಾಗುವುದಿಲ್ಲ. ಆದರೂ ಸಮೀಕ್ಷೆಗಳನ್ನು ತಿರಸ್ಕರಿಸುವುದೂ ಇಲ್ಲ ಎಂದರು.

ಸುದ್ಧಿಗೋಷ್ಠಿಯಲ್ಲಿ ಅಭಯಚಂದ್ರ ಜೈನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಯುವ ಕಾಂಗ್ರೆಸ್ ಮುಖಂಡ ಇರ್ಷಾದ್ ಎನ್.ಜಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News