ಮತದಾನೋತ್ತರ ಸಮೀಕ್ಷೆ ಒಂದು ಮೋಸ: ಆರ್‌ಜೆಡಿ

Update: 2019-05-20 17:34 GMT

ಪಾಟ್ನಾ, ಮೇ.20: ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಲಿದೆ ಎಂಬ ಮತದಾನೋತ್ತರ ಸಮೀಕ್ಷೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿರುವ ರಾಷ್ಟ್ರೀಯ ಜನತಾದಳ ಇದೊಂದು ಮೋಸವಾಗಿದ್ದು ವಾಸ್ತವ ಬಿಜೆಪಿ ನೇತೃತ್ವದ ಆಡಳಿತ ಪಕ್ಷದ ವಿರುದ್ಧವಾಗಿದೆ ಎಂದು ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿಗೆ ಅಧಿಕಾರ ವಹಿಸುತ್ತಾರೆ ಎಂದು ಭವಿಷ್ಯ ನುಡಿಯುವ ಜೊತೆಗೆ ಬಿಹಾರದ 40 ಲೋಕಸಭಾ ಸ್ಥಾನಗಳಲ್ಲಿ ಎನ್‌ಡಿಎ 30 ಅಥವಾ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದೂ ಮತದಾನೋತ್ತರ ಸಮೀಕ್ಷೆಗಳು ತಿಳಿಸಿವೆ. ಬಿಹಾರದಲ್ಲಿ ಬಿಜೆಪಿ ಜೊತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿ(ಯು) ಮತ್ತು ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್‌ಜೆಪಿ ಕೈಜೋಡಿಸಿದೆ. ಮತದಾನೋತ್ತರ ಸಮೀಕ್ಷೆಗಳು ಬೇರೇನೂ ಅಲ್ಲ, ಅವುಗಳು ಸರಕುಗಳನ್ನು ಭಿನ್ನ ಹೆಸರಿನಲ್ಲಿ ಮಾರುವ ಮಾರುಕಟ್ಟೆ ಮಂತ್ರ. ಸಂಘ ಬೆಂಬಲಿತ ಸಂಸ್ಥೆಗಳು ಮತ್ತು ಸಂಪನ್ಮೂಲಗಳ ಮೂಲಕ ವಂಚಿತ ಜನರನ್ನು ಮಾನಸಿಕವಾಗಿ ಶೋಷಿಸುವ ಹಳೆ ತಂತ್ರ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅಭಿಪ್ರಾಯಿಸಿದ್ದಾರೆ.

2015ರ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಉಲ್ಲೇಖಿಸಿ ಯಾದವ್, ಅಂದು ಮಾಧ್ಯಮಗಳು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಜಯ ಗಳಿಸುವುದಾಗಿ ಭವಿಷ್ಯ ನುಡಿದಿದ್ದವು. ಮತ ಎಣಿಕೆಯ ದಿನದಂದು ಬಿಜೆಪಿಗರು ಫಲಿತಾಂಶ ಘೊಷಣೆಗೂ ಮೊದಲೇ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಆದರೆ ಆರ್‌ಜೆಡಿ, ಜೆಡಿಯು ಮತ್ತು ಕಾಂಗ್ರೆಸ್‌ನ ಮಹಾಮೈತ್ರಿ 243 ವಿಧಾನಸಭಾ ಸ್ಥಾನಗಳ ಪೈಕಿ ಮೂರನೇ ಎರಡಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು ಎಂದು ನೆನಪಿಸಿದ್ದಾರೆ.

ಮತಯಂತ್ರಗಳನ್ನು ಇಟ್ಟಿರುವ ಕೋಣೆಯತ್ತ ತೀವ್ರ ನಿಗಾಯಿಡಿ. ಕುತಂತ್ರಗಳನ್ನು ಮಾಡುವವರು ಈ ಬಾರಿ ಯಶಸ್ವಿಯಾಗಬಾರದು ಎಂದು ಇತರ ಪಕ್ಷಗಳಿಗೆ ಕಿವಿಮಾತು ಹೇಳಿರುವ ಯಾದವ್ ಇವಿಎಂಗಳನ್ನು ತಿರುಚಲ್ಪಟ್ಟಿರುವ ಸಾಧ್ಯತೆಗಳ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News