ಕೀಳುಮಟ್ಟದ ಟ್ವೀಟ್: ವಿವೇಕ್ ಒಬೆರಾಯ್‌ಗೆ ಮಹಿಳಾ ಆಯೋಗದ ನೋಟಿಸ್

Update: 2019-05-20 17:29 GMT

ಹೊಸದಿಲ್ಲಿ, ಮೇ.20: ಟ್ವಿಟರ್‌ನಲ್ಲಿ ಮಾಜಿ ವಿಶ್ವಸುಂದರಿ, ನಟಿ ಐಶ್ವರ್ಯಾ ರೈ ಬಗ್ಗೆ ಕೀಳುಮಟ್ಟದ ಮೀಮ್ ಹಾಕಿದ ನಟ ವಿವೇಕ್ ಒಬೆರಾಯ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ಸೋಮವಾರ ನೋಟಿಸ್ ಜಾರಿ ಮಾಡಿದೆ. ಈ ಟ್ವೀಟನ್ನು ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗವೂ ಗಂಭೀರವಾಗಿ ಪರಿಗಣಿಸಿದ್ದು, ಒಬೆರಾಯ್‌ಗೆ ಪ್ರತ್ಯೇಕ ನೋಟಿಸ್ ಜಾರಿ ಮಾಡಲು ನಿರ್ಧರಿಸಿದೆ ಎಂದು ಆಯೋಗದ ಮುಖ್ಯಸ್ಥೆ ವಿಜಯಾ ರಾಹತ್ಕರ್ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷಾ ವರದಿಯ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಒಬೆರಾಯ್, ನಟಿ ಐಶ್ವರ್ಯ ರೈ, ಆಕೆಯ ಪತಿ ಅಭಿಷೇಕ್ ಬಚ್ಚನ್ ಮತ್ತು ಪುತ್ರಿ ಆರಾಧ್ಯ ಜೊತೆಗೆ ಸಲ್ಮಾನ್ ಖಾನ್ ಹಾಗೂ ತನ್ನ ಫೋಟೊ ಮೀಮ್ ಟ್ವೀಟ್ ಮಾಡಿದ್ದರು. ಸಲ್ಮಾನ್ ಖಾನ್ ಫೋಟೊ ಮೇಲೆ ಚುನಾವಣಾ ಸಮೀಕ್ಷೆ ಎಂದು ಬರೆದಿದ್ದರೆ ತನ್ನ ಫೋಟೊ ಮೇಲೆ ಮತದಾನೋತ್ತರ ಸಮೀಕ್ಷೆ ಹಾಗೂ ಅಭಿಷೇಕ್-ಐಶ್ವರ್ಯಾ ಮತ್ತು ಆರಾಧ್ಯಾ ಫೋಟೊ ಮೇಲೆ ಫಲಿತಾಂಶ ಎಂದು ಬರೆದಿದ್ದರು. ಐಶ್ವರ್ಯಾ ರೈ ಜೀವನದಲ್ಲಿ ನಡೆದ ಘಟನಾವಳಿಗಳು ಮತ್ತು ಮತದಾನೋತ್ತರ ಸಮೀಕ್ಷೆಯ ಫಲಿತಾಂಶವನ್ನು ಪರಸ್ಪರ ಹೋಲಿಸಿ ಅವರು ಈ ಮೀಮ್ ಶೇರ್ ಮಾಡಿದ್ದರು.  ಒಬೆರಾಯ್ ಅವರ ಮೀಮ್‌ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ನಟನನ್ನು ಕಟುವಾಗಿ ಟೀಕಿಸಿರುವ ದಿಲ್ಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಲ್, ಈ ಮೀಮ್ ಒಬೆರಾಯ್‌ಯ ರೋಗಗ್ರಸ್ಥ ಮಾನಸಿಕತೆಯನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News