ಕಾಶ್ಮೀರದ ಜನರಿಗೆ ಭದ್ರತಾಪಡೆಗಳಿಂದ ವ್ಯಾಪಕ ಚಿತ್ರಹಿಂಸೆ: ಜೆಕೆಸಿಸಿಎಸ್ ವರದಿ

Update: 2019-05-20 17:32 GMT

ಶ್ರೀನಗರ, ಮೇ.20: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾಪಡೆಗಳು ಜನರನ್ನು ಹಿಂಸಿಸಲು ಅತ್ಯಾಚಾರ, ಗುಪ್ತಾಂಗಗಳಿಗೆ ವಿದ್ಯುತಾಘಾತ, ನಿದ್ದೆ ಮಾಡಲು ಬಿಡದಿರುವುದು ಮತ್ತು ಛಾವಣಿಗೆ ನೇತು ಹಾಕುವುದು ಇತ್ಯಾದಿ ಕ್ರೂರ ವಿಧಾನಗಳನ್ನು ಬಳಸುತ್ತಿವೆ ಎಂದು ಜಮ್ಮು ಮತ್ತು ಕಾಶ್ಮೀರ ನಾಗರಿಕ ಸಮಾಜ ಒಕ್ಕೂಟ (ಜೆಕೆಸಿಸಿಎಸ್) ಬಿಡುಗಡೆ ಮಾಡಿದ ಸಮಗ್ರ ವರದಿಯಲ್ಲಿ ತಿಳಿಸಿದೆ.

ಜೆಕೆಸಿಸಿಎಸ್ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಿಸುವ ವ್ಯಕ್ತಿಗಳು ಮತ್ತು ಮಾನವ ಹಕ್ಕು ಸಂಘಟನೆಗಳ ಒಕ್ಕೂಟವಾಗಿದೆ. ಕಣಿವೆ ರಾಜ್ಯದಲ್ಲಿ 1990ರಿಂದ ಸರಕಾರಿ ಪಡೆಗಳು ಜನರಿಗೆ ನೀಡುತ್ತಿರುವ ಚಿತ್ರಹಿಂಸೆಗಳ ಮೇಲೆ ಈ ವರದಿ ಬೆಳಕು ಚೆಲ್ಲುತ್ತದೆ ಮತ್ತು 1947ರಿಂದ ಕಣಿವೆ ರಾಜ್ಯದಲ್ಲಿ ಮಾಡಲಾಗುತ್ತಿರುವ ಚಿತ್ರಹಿಂಸೆಯ ಬಗ್ಗೆ ಅರಿವನ್ನು ಮೂಡಿಸುತ್ತದೆ. ಸಶಸ್ತ್ರಪಡೆಗಳಿಗೆ ಕಾನೂನಾತ್ಮಕ, ರಾಜಕೀಯ ಮತ್ತು ನೈತಿಕ ರಕ್ಷಣೆಯನ್ನು ನೀಡಿರುವ ಕಾರಣ ಮಾನವ ಹಕ್ಕುಗಳ ಉಲ್ಲಂಘನೆಯ ಒಂದು ಪ್ರಕರಣದಲ್ಲೂ ಶಿಕ್ಷೆಯಾಗಿಲ್ಲ ಎಂದು ವರದಿ ತಿಳಿಸಿದೆ.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಸಶಸ್ತ್ರಪಡೆಗಳು ಎಲ್ಲವೂ ಸರಕಾರದ್ದೇ ಭಾಗವಾಗಿರುವುದರಿಂದ ಭಾರತ ಸರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಚಿತ್ರಹಿಂಸೆಯನ್ನು ಒಂದು ನೀತಿಯಾಗಿ ವ್ಯವಸ್ಥಿತ ಮತ್ತು ಸಾಂಸ್ಥಿಕ ರೀತಿಯಲ್ಲಿ ಬಳಸುತ್ತಿದೆ ಎಂದು ಜೆಕೆಸಿಸಿಎಸ್ ತಿಳಿಸಿದೆ.

ವರದಿಯಲ್ಲಿ, ಬಂಧಿತರನ್ನು ಬೆತ್ತಲುಗೊಳಿಸಿರುವುದು, ಮರದ ದೊಣ್ಣೆ, ಕಬ್ಬಿಣದ ರಾಡ್ ಮತ್ತು ಬೆಲ್ಟ್‌ನಿಂದ ಹೊಡೆದಿರುವುದು, ರೋಲರ್ ಬಳಸಿರುವುದು, ಬಂಧಿತರ ತಲೆಯನ್ನು ನೀರಲ್ಲಿ ಮುಳುಗಿಸುವುದು, ಗುಪ್ತಾಂಗಕ್ಕೆ ವಿದ್ಯುತಾಘಾತ ನೀಡುವುದು, ಛಾವಣಿಯಿಂದ ತಲೆಕೆಳಗಾಗಿ ನೇತು ಹಾಕುವುದು, ಬಿಸಿ ವಸ್ತುವಿನಿಂದ ದೇಹಕ್ಕೆ ಗಾಯ ಮಾಡುವುದು, ಒಂಟಿ ಬಂಧನ, ನಿದ್ದೆ ಮಾಡಲು ಬಿಡದಿರುವುದು, ಲೈಂಗಿಕ ಹಿಂಸೆ, ಅತ್ಯಾಚಾರ ಇತ್ಯಾದಿ ಚಿತ್ರಹಿಂಸೆಗಳನ್ನು ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News