ಅಯೋಧ್ಯೆಯ ಶ್ರೀಸೀತಾ ರಾಮ ಮಂದಿರದಲ್ಲಿ ಇಫ್ತಾರ್ ಕೂಟ

Update: 2019-05-21 12:17 GMT

ಅಯೋಧ್ಯೆ,ಮೇ 21: ಪವಿತ್ರ ರಮಝಾನ್ ಮಾಸದಲ್ಲಿ ಸೋಮವಾರ ಇಲ್ಲಿಯ ಶ್ರೀಸೀತಾ ರಾಮ ಮಂದಿರದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು.

ಕೋಮು ಸೌಹಾರ್ದಕ್ಕೆ ಉಜ್ವಲ ಉದಾಹರಣೆಯಾಗಿ ನಡೆದ ಈ ಇಫ್ತಾರ್ ಕೂಟದಲ್ಲಿ ವಿವಿಧ ಧರ್ಮಗಳ ಜನರು ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡು ಇಫ್ತಾರ್ ಭೋಜನವನ್ನು ಸವಿದರು.

ನಾವು ಇಫ್ತಾರ್ ಕೂಟವನ್ನು ಆಯೋಜಿಸಿದ್ದು ಇದು ಮೂರನೇ ಬಾರಿಯಾಗಿದೆ. ಭವಿಷ್ಯದಲ್ಲಿಯೂ ಇದನ್ನು ನಾವು ಮುಂದುವರಿಸುತ್ತೇವೆ. ಪ್ರತಿಯೊಂದೂ ಹಬ್ಬವನ್ನು ನಾವು ಭಾರೀ ಉತ್ಸಾಹದಿಂದ ಆಚರಿಸಬೇಕು ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ದೇವಳದ ಅರ್ಚಕ ಯುಗಲ್ ಕಿಶೋರ್ ನುಡಿದರು.

ಇಫ್ತಾರ್‌ನಲ್ಲಿ ಭಾಗವಹಿಸಿದ್ದ ಮುಝಮ್ಮಿಲ್ ಫಿಝಾ ಅವರೂ ಇದೇ ಭಾವನೆಯನ್ನು ಪ್ರತಿಧ್ವನಿಸಿದರು. ಪ್ರತಿವರ್ಷ ತನ್ನ ಹಿಂದು ಸೋದರರ ಜೊತೆಗೂಡಿ ನವರಾತ್ರಿಯನ್ನು ಆಚರಿಸುತ್ತಿರುವುದಾಗಿ ಅವರು ಹೇಳಿದರು.

ತಮ್ಮದೇ ಆದ ಆಜೆಂಡಾಗಳನ್ನು ಹೊಂದಿರುವ ಜನರು ಸಮುದಾಯಗಳು ಒಂದಾಗುವುದನ್ನು ಬಯಸುವುದಿಲ್ಲ ಮತ್ತು ಇಂತಹ ಕಾರ್ಯಕ್ರಮಗಳನ್ನು ನಡೆಸುವುದಿಲ್ಲ. ಜನರು ಧರ್ಮದ ಹೆಸರಿನಲ್ಲಿ ರಾಜಕೀಯವನ್ನು ನಡೆಸುವ ಈ ದೇಶದಲ್ಲಿ ಕಿಶೋರ್‌ರಂತಹವರು ಪ್ರೀತಿಯ ಸಂದೇಶಗಳನ್ನು ರವಾನಿಸುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News