ಉತ್ತರಪ್ರದೇಶ, ಬಿಹಾರದಲ್ಲಿ ಇವಿಎಂಗಳ ಸಾಗಾಟ: ವೀಡಿಯೊ ವೈರಲ್

Update: 2019-05-21 17:54 GMT

ಲಕ್ನೋ, ಮೇ 21: ಉತ್ತರಪ್ರದೇಶ, ಬಿಹಾರ್, ಪಂಜಾಬ್ ಹಾಗೂ ಹರ್ಯಾಣದಲ್ಲಿ ಇವಿಎಂಗಳನ್ನು ಖಾಸಗಿ ವಾಹನಗಳಲ್ಲಿ ಸಾಗಿಸುತ್ತಿರುವ ವೀಡಿಯೊ ಮಂಗಳವಾರ ಬೆಳಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದ ಬಳಿಕ ಇವಿಎಂ ತಿರುಚುವಿಕೆಯ ಆರೋಪ ಮತ್ತೆ ಕೇಳಿ ಬಂದಿದೆ.

 ಚಾಂಡೌಲಿ ಲೋಕಸಭಾ ಕ್ಷೇತ್ರದಲ್ಲಿ ಸೋಮವಾರ ಮೊಬೈಲ್ ಫೋನ್ ಮೂಲಕ ಮಾಡಲಾದ ವೀಡಿಯೊ ದೃಶ್ಯದಲ್ಲಿ ಇವಿಎಂಗಳನ್ನು ಇಳಿಸುವುದು, ಮತ ಎಣಿಕೆ ಕೇಂದ್ರದಂತೆ ಕಾಣುವ ಕೊಠಡಿಯ ಒಳಗೆ ಹಾಕುವುದು ಕಂಡು ಬಂದಿದೆ. ಚಂಡೌಲಿಯ ಎಸ್ಪಿ ಬೆಂಬಲಿಗರು ಇದರ ವೀಡಿಯೊ ಮಾಡಿದ್ದಾರೆ. ಈ ವೀಡಿಯೊದಿಂದಾಗಿ ಮತದಾನ ನಡೆದ ಒಂದು ದಿನದ ಬಳಿಕ ಇವಿಎಂಗಳನ್ನು ಇಳಿಸಿರುವುದು ಯಾಕೆ ? ಮೊದಲೇ ಯಾಕೆ ಇಲ್ಲಿಗೆ ತರಲಿಲ್ಲ ? ಎಂಬ ಪ್ರಶ್ನೆಗಳು ಉದ್ಭವಿಸಿವೆ.

ವೀಡಿಯೊದಲ್ಲಿ ಕಂಡು ಬರುವ ಇವಿಎಂಗಳು ಚಂಡೌಲಿಯ ವಿಧಾಸಭಾ ಕ್ಷೇತ್ರದಲ್ಲಿ ಮೀಸಲು ಇರಿಸಿದ್ದ 35 ಇವಿಎಂಗಳು ಎಂದು ಜಿಲ್ಲಾಡಳಿತ ಹೇಳಿದೆ. ಸಾಗಾಟ ಸಮಸ್ಯೆಯಿಂದ ಈ ಇವಿಎಂಗಳು ದಾಸ್ತಾನು ಕೊಠಡಿ ಹಾಗೂ ಮತ ಎಣಿಕೆ ಕೇಂದ್ರಕ್ಕೆ ತಡವಾಗಿ ತಲುಪಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಯಮದ ಪ್ರಕಾರ ಮತದಾನಕ್ಕೆ ಬಳಸಲಾದ ಇವಿಎಂಗಳನ್ನು ಸಾಗಿಸುವ ಸಂದರ್ಭವೇ ಇತರ ಇವಿಎಂಗಳನ್ನು ಕೂಡ ಸಾಗಾಟ ಮಾಡಬೇಕು. ಪೂರ್ವ ಉತ್ತರಪ್ರದೇಶದ ಗಾಝಿಪುರದಲ್ಲಿ ಬಿಎಸ್ಪಿ ಅಭ್ಯರ್ಥಿ ಅಫ್ಝಲ್ ಅನ್ಸಾರಿ ಇವಿಎಂಗಳ ದಾಸ್ತಾನ ಕೊಠಡಿ ಮುಂದೆ ಧರಣಿ ಸೋಮವಾರ ರಾತ್ರಿ ನಡೆಸಿದ್ದರು. ಒಂದು ವಾಹನ ತುಂಬ ಇವಿಎಂಗಳನ್ನು ಸಾಗಿಸುವ ಪ್ರಯತ್ನ ನಡೆದಿದೆ ಎಂದು ಅನ್ಸಾರಿ ಹಾಗೂ ಅವರ ಬೆಂಬಲಿಗರು ಆರೋಪಿಸಿದ್ದರು.

ಆದರೆ, ಈ ಆರೋಪವನ್ನು ಪೊಲೀಸರು ಹಾಗೂ ಜಿಲ್ಲಾಡಳಿತ ನಿರಾಕರಿಸಿದೆ. ಈ ಆರೋಪ ನಿಷ್ಪ್ರಯೋಜಕ ಎಂದು ಹೇಳಿರುವ ಚುನಾವಣಾ ಆಯೋಗ, ಇವಿಎಂಗಳನ್ನು ಸೂಕ್ತ ಭದ್ರತೆ ಹಾಗೂ ಶಿಷ್ಟಾಚಾರದೊಂದಿಗೆ ನಿರ್ವಹಿಸಲಾಗುತ್ತಿದೆ ಎಂದು ಚುನಾವಣಾ ಆಯೋಗ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News