ಒಮಾನ್ ದೇಶದ ಲೇಖಕಿ ಜೊಖಾ ಅಲ್ಹಾರ್ತಿಗೆ ಪ್ರತಿಷ್ಠಿತ ‘ಮ್ಯಾನ್ ಬೂಕರ್’ ಪ್ರಶಸ್ತಿ

Update: 2019-05-22 08:47 GMT
ಫೋಟೊ ಕೃಪೆ: independent.co.uk

ಪ್ಯಾರಿಸ್, ಮೇ 22:  ಪ್ರತಿಷ್ಠಿತ ‘ಮ್ಯಾನ್ ಬೂಕರ್’ ಇಂಟರ್ ನ್ಯಾಷನಲ್  ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ಪ್ರಪ್ರಥಮ ಅರಬಿಕ್ ಲೇಖಕಿ ಎಂಬ ಹೆಗ್ಗಳಿಕೆಗೆ ಜೊಖಾ ಅಲ್ಹಾರ್ತಿ  ಪಾತ್ರರಾಗಿದ್ದಾರೆ. ಒಮಾನ್ ದೇಶದವರಾಗಿರುವ ಜೊಖಾ ಅವರ ಕಾದಂಬರಿ ‘ಸೆಲೆಸ್ಟಿಯಲ್ ಬಾಡೀಸ್'ಗೆ ಈ ಪ್ರತಿಷ್ಠಿತ ಪ್ರಶಸ್ತಿ ಒಲಿದಿದೆ. ಆಕೆಯ ತವರು ದೇಶ ಒಮಾನ್ ನಲ್ಲಿ ವಸಾಹತುಶಾಹಿ-ಪೂರ್ವ ಇತಿಹಾಸದತ್ತ ಈ ಕಾದಂಬರಿ ಬೆಳಕು ಚೆಲ್ಲಿದೆ.

ನಲ್ವತ್ತು ವರ್ಷದ ಜೊಖಾ ಈ ಹಿಂದೆ ಒಂದು ಮಕ್ಕಳ ಕೃತಿ ಹಾಗೂ ಅರಬಿಕ್ ಭಾಷೆಯಲ್ಲಿ 3 ಕಾದಂಬರಿಗಳನ್ನು ರಚಿಸಿದ್ದಾರೆ. ಎಡಿನ್‍ ಬರ್ಗ್ ವಿಶ್ವವಿದ್ಯಾಲಯದಲ್ಲಿ ಶಾಸ್ತ್ರೀಯ ಅರಬಿಕ್ ಕವನಗಳ ಬಗ್ಗೆ ಶಿಕ್ಷಣ ಪಡೆದಿರುವ ಅವರು ಮಸ್ಕತ್ ನಲ್ಲಿರುವ ಸುಲ್ತಾನ್ ಖಾಬೂಸ್ ವಿಶ್ವವಿದ್ಯಾಲಯದ ಶಿಕ್ಷಕಿಯಾಗಿದ್ದಾರೆ.

ಈ 50,000 ಪೌಂಡ್ ನಗದು ಬಹುಮಾನವಿರುವ ಪ್ರಶಸ್ತಿಯನ್ನು ಲೇಖಕಿ ಹಾಗೂ ಅನುವಾದಕರ ನಡುವೆ ಸಮನಾಗಿ ಹಂಚಲಾಗುವುದು. ಆಕ್ಸ್‍ಫರ್ಡ್ ವಿವಿಯಲ್ಲಿ ಅರಬಿಕ್ ಸಾಹಿತ್ಯ ಕಲಿಸುವ ಅಮೆರಿಕಾದ ಮೇರಿಲಿನ್ ಬೂತ್ ಈ ಕೃತಿಯನ್ನು ಭಾಷಾಂತರಿಸಿದ್ದಾರೆ.

ಓಮನ್ ದೇಶದ ಅಲ್-ಅವಾಫಿ ಗ್ರಾಮದ ಮೂವರು ಸೋದರಿಯರ ಜೀವನದ ಸುತ್ತ ಹೆಣೆದಿರುವ ಕಥೆಯನ್ನು ‘ಸೆಲೆಸ್ಟಿಯಲ್ ಬಾಡೀಸ್' ಹೊಂದಿದೆ.  ಮಯ್ಯಾ ಹೆಸರಿನ ಒಬ್ಬಳು ಪ್ರೇಮ ಭಗ್ನಗೊಂಡ ನಂತರ ಅಬ್ದುಲ್ಲಾ ಎಂಬಾತನನ್ನು ವಿವಾಹವಾದರೆ ಅಸ್ಮಾ ತನ್ನ ಕರ್ತವ್ಯವೆಂದು ತಿಳಿದುಕೊಂಡು ವಿವಾಹವಾಗುತ್ತಾಳೆ, ಮೂರನೆಯವಳಾದ ಖಾವ್ಲಾ ಕೆನಡಾಗೆ ವಲಸೆ ಹೋಗಿರುವ ಪ್ರಿಯತಮನಿಗಾಗಿ ಕಾದಿರುತ್ತಾಳೆ. ಓಮನ್ ದೇಶದ ನಾಗರಿಕತೆ ಸಂಪ್ರದಾಯವಾದಿತ್ವದಿಂದ, ಗುಲಾಮಗಿರಿಯಿಂದ, ಕ್ಲಿಷ್ಟಕರ ಆಧುನಿಕತೆಯತ್ತ ಸಾಗುತ್ತಿರುವುದಕ್ಕೆ ಈ ಸೋದರಿಯರು  ಸಾಕ್ಷಿಯಾಗುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News