ಮಂಗಳೂರು: ಗೋಡ್ಸೆ ಜನ್ಮದಿನಾಚರಣೆ ಮಾಡಿದ ಓರ್ವ ಸೆರೆ

Update: 2019-05-22 10:30 GMT

ಮಂಗಳೂರು, ಮೇ 22: ಮಂಗಳೂರಿನಲ್ಲಿ ಗೋಡ್ಸೆ ಜನ್ಮ ದಿನಾಚರಣೆ ಮಾಡಿದ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಭಾರಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಭಾರಿ ರಾಜೇಶ್ ಪೂಜಾರಿ ಬಂಧಿತ ಆರೋಪಿ. ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ ಉಳ್ಳಾಲ ಪೊಲೀಸರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಘಟನೆ ವಿವರ

ನಾಥೂರಾಮ್ ಗೋಡ್ಸೆ ಬಗ್ಗೆ ಚರ್ಚೆಗಳು ಮುನ್ನೆಲೆಗೆ ಬಂದಿರುವ ನಡುವೆಯೇ ಮಂಗಳೂರಿನಲ್ಲಿ ಮೇ 21ರಂದು ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಸಮಿತಿಯು ನಾಥೂರಾಮ್ ಗೋಡ್ಸೆಯ ಜಯಂತಿಯನ್ನು ಆಚರಿಸಿತ್ತು.

ಕಾರ್ಯಕ್ರಮ ಆಯೋಜಿಸಿದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ಮಂಗಳೂರು ಪೊಲೀಸರು ಆರೋಪಿಗಳ ವಿರುದ್ಧ ಕೇಸು ದಾಖಲಿಸಿದ್ದಾರೆ.

ಕಾರ್ಯಕ್ರಮದ ಫೋಟೊದಲ್ಲಿದ್ದ ಹಿಂದೂ ಮಹಾಸಭಾ ರಾಜ್ಯ ಅಧ್ಯಕ್ಷ ಎಲ್.ಕೆ. ಸುವರ್ಣ, ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಹಾಗೂ ಲೋಕೇಶ್ ಸೇರಿದಂತೆ ಐವರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರ ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News