ಫ್ರಾನ್ಸ್: ಭಾರತೀಯ ವಾಯುಪಡೆಯ ರಫೇಲ್ ಕಚೇರಿಗೆ ನುಗ್ಗಲು ಅಪರಿಚಿತರಿಂದ ಯತ್ನ!

Update: 2019-05-22 15:15 GMT

ಹೊಸದಿಲ್ಲಿ,ಮೇ 22: ಭಾರತವು ಬೇಡಿಕೆ ಸಲ್ಲಿಸಿರುವ 36 ರಫೇಲ್ ಯುದ್ಧವಿಮಾನಗಳ ತಯಾರಿಕೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಪ್ಯಾರಿಸ್‌ನಲ್ಲಿಯ ಭಾರತೀಯ ವಾಯಪಡೆ(ಐಎಎಫ್)ಯ ಕಚೇರಿಗೆ ಅಪರಿಚಿತ ವ್ಯಕ್ತಿಗಳು ರವಿವಾರ ರಾತ್ರಿ ನುಗ್ಗಿದ್ದು, ಇದು ಭಾರತದ ರಾಷ್ಟ್ರೀಯ ಭದ್ರತಾ ಯೋಜನೆಗೆ ಮುಖ್ಯವಾಗಿರುವ ವಿಮಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಕದಿಯಲು ಸಂಭಾವ್ಯ ಬೇಹುಗಾರಿಕೆ ಪ್ರಯತ್ನವಾಗಿದೆ ಎಂದು ಶಂಕಿಸಲಾಗಿದೆ.

ಪ್ಯಾರಿಸ್‌ನ ಸೇಂಟ್ ಕ್ಲಾಡ್ ಉಪನಗರದಲ್ಲಿರುವ ಗ್ರುಪ್ ಕ್ಯಾಪ್ಟನ್ ದರ್ಜೆಯ ಅಧಿಕಾರಿ ನೇತೃತ್ವದ ಐಎಎಫ್ ಯೋಜನೆ ನಿರ್ವಹಣೆ ತಂಡದ ಕಚೇರಿಯಲ್ಲಿ ಈ ಘಟನೆ ನಡೆದಿದ್ದು,ಯಾವುದೇ ಹಾರ್ಡ್ ಡಿಸ್ಕ್ ದಾಖಲೆ ಕಳ್ಳತನವಾಗಿಲ್ಲ ಎಂದು ಭಾರತೀಯ ವಾಯುಪಡೆಯಲ್ಲಿನ ಮೂಲಗಳು ತಿಳಿಸಿದವು. ಕಚೇರಿಯಲ್ಲಿ ಅಮೂಲ್ಯ ವಸ್ತುಗಳು ಅಥವಾ ಹಣವನ್ನು ಇಡಲಾಗುವುದಿಲ್ಲವಾದ್ದರಿಂದ ಮಾಹಿತಿ ಕಳ್ಳತನವು ಅಪರಿಚಿತ ವ್ಯಕ್ತಿಗಳ ಮುಖ್ಯ ಉದ್ದೇಶವಾಗಿರಬಹುದು ಎಂದವು.

ಭಾರತೀಯ ರಫೇಲ್ ತಂಡದ ಕಚೇರಿಯು ಫ್ರೆಂಚ್ ಡಸಾಲ್ಟ್ ಏವಿಯೇಷನ್ ಕಚೇರಿ ಸಂಕೀರ್ಣದ ಪರಿಸರದಲ್ಲಿಯೇ ಇದೆ. ವಾಯುಪಡೆಯು ಈಗಾಗಲೇ ರಕ್ಷಣಾ ಸಚಿವಾಲಯಕ್ಕೆ ಈ ಬಗ್ಗೆ ಮಾಹಿತಿಯನ್ನು ಸಲ್ಲಿಸಿದೆ ಮತ್ತು ಫ್ರೆಂಚ್ ಪೊಲೀಸ್ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News