ಮೇ 26: ಮಂಗಳೂರಿನಲ್ಲಿ ಪ್ರಪ್ರಥಮ ಕನ್ನಡ ವೈದ್ಯ ಬರಹಗಾರರ ಸಮ್ಮೇಳನ

Update: 2019-05-22 12:06 GMT

ಮಂಗಳೂರು, ಮೇ 22: ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಘಟಕದ ವತಿಯಿಂದ ಸಂಘದ ಮಂಗಳೂರು ಶಾಖೆಯ ಆಶ್ರಯದಲ್ಲಿ ಮತ್ತು ಸಂಘದ ಕನ್ನಡ ವೈದ್ಯ ಬರಹಗಾರರ ಬಳಗದ ಸಹಯೋಗದೊಂದಿಗೆ ನಗರದ ಐಎಂಎ ಹಾಲ್‌ನ ಡಾ.ಎಂ.ಶಿವರಾಮ್ ವೇದಿಕೆಯಲ್ಲಿ ಮೇ 26ರಂದು ಕನ್ನಡ ವೈದ್ಯ ಬರಹಗಾರರ ಪ್ರಥಮ ರಾಜ್ಯ ಸಮ್ಮೇಳನ ಮತ್ತು ಶ್ರೇಷ್ಠ ವೈದ್ಯ ಸಾಹಿತಿ 2018 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಲಿದೆ ಎಂದು ಸಂಘದ ಅಧ್ಯಕ್ಷ ಡಾ.ಬಿ.ಸಚ್ಚಿದಾನಂದ ರೈ ಹೇಳಿದರು.

ಐಎಂಎ ಹಾಲ್‌ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕನ್ನಡದಲ್ಲಿ ವೈದ್ಯ ಸಾಹಿತ್ಯ ವಿಫುಲವಾಗಿ ಬೆಳೆದಿದ್ದರೂ ಕೂಡ ವೈದ್ಯ ಸಾಹಿತಿಗಳ ಸಮ್ಮೇಳನ ಈವರೆಗೆ ನಡೆದಿಲ್ಲ. ಉದಯೋನ್ಮುಖ ವೈದ್ಯ ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮತ್ತು ವೈದ್ಯ ಸಾಹಿತಿಗಳ ಚಿಂತನ ಮಂಥನಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂಧ ಈ ಮಹತ್ವದ ಸಮ್ಮೇಳನ ಆಯೋಜಿಸಲಾಗಿದೆ ಎಂದರು.

ಕನ್ನಡ ವೈದ್ಯ ಸಾಹಿತ್ಯದಲ್ಲಿ ಅನೇಕ ವೈದ್ಯರು ಸಾಕಷ್ಟು ಕೆಲಸ ಮಾಡಿದ್ದಾರೆ. ಹಿರಿಯ ಮತ್ತು ಕಿರಿಯ ವೈದ್ಯ ಸಾಹಿತಿಗಳ ಮಧ್ಯೆ ಸಂವಹನ ಸಾಧಿಸಲು ಈ ಸಮ್ಮೇಳನ ವೇದಿಕೆಯಾಗಲಿದೆ. ವೈದ್ಯ ವಿಜ್ಞಾನದ ಅಂಶಗಳು ಬಹುತೇಕ ಆಂಗ್ಲಭಾಷೆಯಲ್ಲಿದ್ದು, ಅದನ್ನು ಕನ್ನಡದಲ್ಲಿ ಜನ ಸಾಮಾನ್ಯರಿಗೆ ಮತ್ತು ವೈದ್ಯರಿಗೆ ತಿಳಿಸುವ ಅಗತ್ಯವಿದೆ. ಜನಸಾಮಾನ್ಯರ ಆಡುಭಾಷೆಯಲ್ಲಿ ವೈದ್ಯಕೀಯ ಮಾಹಿತಿ ನೀಡಿದರೆ ಆರೋಗ್ಯದ ಮೇಲೂ ಸತ್ಪರಿಣಾಮ ಬೀರಲಿದೆ ಎಂದು ಡಾ.ಬಿ.ಸಚ್ಚಿದಾನಂದ ರೈ ನುಡಿದರು.

ಐಎಂಎ ಆಶ್ರಯದಲ್ಲಿ 2017ರಲ್ಲಿ ಕನ್ನಡ ವೈದ್ಯ ಬರಹಗಾರರ ಬಳಗವನ್ನು ಸ್ಥಾಪಿಸಿದ್ದು, ಪ್ರತೀ ವರ್ಷ ಅತ್ಯುತ್ತಮ ವೈದ್ಯ ಬರಹಗಾರರಿಗೆ ಶ್ರೇಷ್ಠ ಸಾಹಿತಿ ಪ್ರಶಸ್ತಿಯನ್ನು ನೀಡುವ ಉದ್ದೇಶ ಹೊಂದಿದೆ. ಕಳೆದ ಬಾರಿ ಮೈಸೂರಿನ ಡಾ. ಎಸ್ಪಿ ಯೋಗಣ್ಣ ಮತ್ತು ಭದ್ರಾವತಿಯ ಡಾ.ವೀಣಾ ಭಟ್‌ಗೆ ಪ್ರಶಸ್ತಿ ನೀಡಲಾಗಿದೆ. ಈ ಬಾರಿಯೂ 15 ಮಂದಿ ವೈದ್ಯರ ಹೆಸರು ಪಟ್ಟಿಯಲ್ಲಿದ್ದು, ರಾಜ್ಯ ಘಟಕ ಘೋಷಿಸಲ್ಪಟ್ಟ ವೈದ್ಯರಿಗೆ 2018ನೆ ಸಾಲಿನ ಪ್ರಶಸ್ತಿಯನ್ನು ಈ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದರಲ್ಲದೆ, ಸಮ್ಮೇಳನದಲ್ಲಿ ಯುವ ವೈದ್ಯರ ಘಟಕವನ್ನು ತೆರೆಯಲಾ ಗುವುದು ಮತ್ತು ಆ ಮೂಲಕ ಯುವ ವೈದ್ಯರು ಎದುರಿಸುವ ಸಮಸ್ಯೆಗೆ ಸ್ಪಂದಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಮೈಸೂರಿನ ಡಾ.ಎಸ್ಪಿ ಯೋಗಣ್ಣ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಕುಲಪತಿ ಡಾ.ಎಸ್. ಸಚ್ಚಿದಾನಂದ ಉದ್ಘಾಟಿಸುವರು. ಕಸಾಪ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ್ ಆಶಯ ಭಾಷಣ ಮಾಡುವರು. ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಉಪಸ್ಥಿತರಿರುವರು. ವೈದ್ಯರು: ವೈದ್ಯಕೀಯ ಸೇವೆ ಮತ್ತು ತಲ್ಲಣಗಳು, ಕನ್ನಡ ಆರೋಗ್ಯ ಸಾಹಿತ್ಯದ ಮೈಲುಗಲ್ಲುಗಳು, ವೈದ್ಯಕೀಯ ಕನ್ನಡ ಸಾಹಿತ್ಯ-ಅಂದು,ಇಂದು, ಮುಂದು., ವೈದ್ಯರು ಮತ್ತು ಪತ್ರಿಕಾ ಅಂಕಣಗಳು, ವೈದ್ಯಕೀಯ ವೃತ್ತಿಯಲ್ಲಿ ವಿನೋದದ ಸನ್ನಿವೇಶಗಳು, ಮಹಿಳಾ ಮತ್ತು ಮಕ್ಕಳ ಸಾಹಿತ್ಯದಲ್ಲಿ ವೈದ್ಯರ ಸೇವೆ, ಕನ್ನಡದಲ್ಲಿ ರೋಗ ಮಾಹಿತಿ, ಮಾರ್ಗದರ್ಶನ, ಒಪ್ಪಿಗೆ/ ಅನುಮತಿ ದಾಖಲೀಕರಣ ಇತ್ಯಾದಿ ಒಂದು ಪ್ರಯತ್ನ ಇತ್ಯಾದಿ ವಿಷಯದಲ್ಲಿ 6 ಗೋಷ್ಠಿಗಳು ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಐಎಂಎ ಸಂಘಟನಾ ಕಾರ್ಯದರ್ಶಿ ಡಾ. ಅಣ್ಣಯ್ಯ ಕುಲಾಲ್, ಸಹ ಸಂಘಟನಾ ಕಾರ್ಯದರ್ಶಿ ಡಾ. ಸುಧೀಂದ್ರ ರಾವ್, ಡಾ. ಪ್ರಶಾಂತ್, ಡಾ. ಮೋಹನ್ ಪೈ, ಡಾ. ಕೆ.ಆರ್.ಕಾಮತ್, ಡಾ.ಬಿ.ಆರ್.ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News