ಎನ್‌ಎಂಪಿಟಿಯಲ್ಲಿ ಯಾಂತ್ರೀಕೃತ ಕಲ್ಲಿದಲು ಟರ್ಮಿನಲ್ ಉದ್ಘಾಟನೆ

Update: 2019-05-22 12:34 GMT

ಮಂಗಳೂರು, ಮೇ 22: ನವಮಂಗಳೂರು ಬಂದರು ಮಂಡಳಿಯಲ್ಲಿ ಯಾಂತ್ರೀಕೃತ ಸಾಮಾನ್ಯ ಬಳಕೆದಾರರ ಕಲ್ಲಿದಲು ಟರ್ಮಿನಲ್‌ನ್ನು ಇಂದು ನೌಕಾ ಸಚಿವಾಲಯದ ಕಾರ್ಯದರ್ಶಿ ಗೋಪಾಲ್ ಕೃಷ್ಣ ಉದ್ಘಾಟಿಸಿದರು.

ಚೆಟ್ಟಿನಾಡ್ ಮಂಗಳೂರು ಕೋಲ್ ಟರ್ಮಿನಲ್ ಸಂಸ್ಥೆಯಿಂದ ಈ ನೂತನ ಯಾಂತ್ರೀಕೃತ ಟರ್ಮಿನಲ್ ನಿರ್ವಹಿಸಲ್ಪಡಲಿದ್ದು, 470 ಕೋಟಿ ರೂ.ಗಳ ಯೋಜನೆ ಇದಾಗಿದೆ. 2017ರ ಫೆಬ್ರವರಿಯಲ್ಲಿ ಈ ಯೋಜನೆ ಆರಂಭಗೊಂಡಿದ್ದು, ಇದೀಗ ಉದ್ಘಾಟನೆಗೊಂಡಿದೆ. ಜೂನ್ ತಿಂಗಳಿ ನಿಂದ ಕಾರ್ಯಾಚರಣೆ ಆರಂಭಿಸಲಿದೆ ಎಂದು ಚೆಟ್ಟಿನಾಡ್ ಸಂಸ್ಥೆಯ ಸಮೂಹ ಅಧ್ಯಕ್ಷ (ತಾಂತ್ರಿಕ) ಹಾಗೂ ನೂತನ ಟರ್ಮಿನಲ್‌ನ ನಿರ್ದೇಶಕ ಚಂದ್ರಮೊಲೀಶ್ವರನ್ ವಿ. ಮಾಹಿತಿ ನೀಡಿದರು.

ಗೋಪಾಲ್ ಕೃಷ್ಣ ಹಾಗೂ ಎನ್‌ಎಂಪಿಟಿಯ ನೂತನ ಅಧ್ಯಕ್ಷೆ ಡಾ. ಎಂ. ಬೀನಾ ಉಪಸ್ಥಿತರಿದ್ದು ಟರ್ಮಿನಲ್ ಕಾರ್ಯನಿರ್ವಹಣೆ, ಸುರಕ್ಷತಾ ಕ್ರಮಗಳು ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿ ತೆಗೆದುಕೊಳ್ಳಲಾದ ಮುಂಜಾಗೃತಾ ಕ್ರಮಗಳನ್ನು ಪರಿಶೀಲಿಸಿದರು.

ಚೆಟ್ಟಿನಾಡ್ ಸಂಸ್ಥೆಯು ಕಳೆದ 30 ವರ್ಷಗಳಿಂದ ಮಾನವಶ್ರಮದಲ್ಲಿ ಕಲ್ಲಿದಲು ನಿರ್ವಹಣೆಯನ್ನು ನಡೆಸಿಕೊಂಡು ಬಂದಿದೆ. ಕಳೆದ 10 ವರ್ಷಗಳಿಂದ ಯಾಂತ್ರೀಕೃತ ಕಲ್ಲಿದಲು ನಿರ್ವಹಣೆಯ ಟರ್ಮಿನಲ್ ಕೂಡಾ ಸಂಸ್ಥೆಯು ನಿರ್ವಹಿಸುತ್ತಿದ್ದು, ಮಂಗಳೂರಿನ ಎನ್‌ಎಂಪಿಟಿಯಲ್ಲಿ ಆರಂಭಗೊಂಡ ಟರ್ಮಿನಲ್ ಸಂಸ್ಥೆಯ ಎರನೆ ಯಾಂತ್ರೀಕೃತ ಟರ್ಮಿನಲ್ ಆಗಿದೆ.

ಟರ್ಮಿನಲ್‌ನ ಸಿಂಗಲ್ ಬರ್ತ್ 325 ಮೀಟರ್ ಉದ್ದ ಹಾಗೂ 25 ಮೀಟರ್ ಅಗಲದಿಂದ ಕೂಡಿದೆ. ಗರಿಷ್ಠ 15.1 ಮೀಟರ್ ಆಳದ ಅನುಮತಿಯೊಂದಿಗೆ 1,00,000ಡಿಬ್ಲುಟಿ ಸಾಮರ್ಥ್ಯದ ಹಡಗನ್ನು ನಿರ್ವಹಿಸುವ ಸಾಮರ್ಥ್ಯವನ್ನು ಈ ಟರ್ಮಿನಲ್ ಹೊಂದಿದೆ.

ನೂತನ ಟರ್ಮಿನಲ್ ವಾರ್ಷಿಕ 6.75 ಮಿಲಿಯನ್ ಟನ್ ಕಲ್ಲಿದ್ದಲು ನಿರ್ವಹಣೆಯ ಅನುಮತಿಯನ್ನು ಹೊಂದಿದ್ದು, ಇದರ ಸಾಮರ್ಥ್ಯ 10 ಮಿಲಿಯ ಟನ್ ಆಗಿದೆ. ಸುರಕ್ಷತೆಗೆ ಸಂಬಂಧಿಸಿ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ವಹಿಸಲಾಗಿದ್ದು, 14 ಮೀಟರ್ ಎತ್ತರದ ಗಾಳಿ ನಿರೋಧಕ ಆವರಣಗೋಡೆಗಳನ್ನು ನಿರ್ಮಿಸಲಾಗಿದೆ. ನಿರಂತರ ನೀರು ಚಿಮುಕಿಸುವ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ ಎಂದು ಟರ್ಮಿನಲ್‌ನ ನಿರ್ದೇಶಕ ಚಂದ್ರಮೊಲೀಶ್ವರನ್ ವಿ. ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News