ಬಿಗುಭದ್ರತೆ ನಡುವೆ ಮತ ಎಣಿಕೆಗೆ ಸಜ್ಜುಗೊಂಡ ಉಡುಪಿ ಕೇಂದ್ರ

Update: 2019-05-22 12:57 GMT

ಉಡುಪಿ, ಮೇ 15: ನಗರದ ಬ್ರಹ್ಮಗಿರಿಯಲ್ಲಿರುವ ಸೈಂಟ್ ಸಿಸಿಲೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾ. 23ರಂದು ನಡೆಯುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಮತಗಳ ಎಣಿಕೆಯು ಗುರುವಾರ ಬೆಳಗ್ಗೆ 8 ಗಂಟೆಗೆ ಪ್ರಾರಂಭಗೊಳ್ಳಲಿದ್ದು, ಅಪರಾಹ್ನದ ಸುಮಾರಿಗೆ ಕ್ಷೇತ್ರದ ಇವಿಎಂ ಮತಯಂತ್ರದಲ್ಲಿರುವ ಮತಗಳ ಎಣಿಕೆಯ ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆ ಇದೆ.

ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ಐದು ವಿವಿಪ್ಯಾಟ್ ಮತಗಳ ಎಣಿಕೆಯನ್ನು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿರುವುದರಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿರುವ ಎಂಟು ವಿಧಾನಸಭಾ ಕ್ಷೇತ್ರಗಳ ಒಟ್ಟು 40 ವಿವಿಪ್ಯಾಟ್‌ಗಳ ಮತಚೀಟಿಯ ಎಣಿಕೆ ಮುಗಿದು ಅದಕ್ಕೆ ಚುನಾವಣಾ ಆಯೋಗದ ಹಸಿರು ನಿಶಾನೆ ದೊರೆತ ಬಳಿಕವಷ್ಟೇ ಅಧಿಕೃತ ಫಲಿತಾಂಶ ಪ್ರಕಟಗೊಳ್ಳಲಿದ್ದು, ಇದಕ್ಕೆ ಸಂಜೆಯವರೆಗೆ ಕಾಯಬೇಕಾಗಬಹುದು. ಪ್ರತಿ ಕ್ಷೇತ್ರದ ತಲಾ 5 ವಿವಿಪ್ಯಾಟ್‌ಗಳನ್ನು ಚೀಟಿ ಮೂಲಕ ಆಯ್ಕೆ ಮಾಡಲಾಗುತ್ತದೆ.

ಕಳೆದ ಮೂರು ದಿನಗಳಿಂದ ಪ್ರತಿದಿನ ಮತ ಎಣಿಕಾ ಕೇಂದ್ರಕ್ಕೆ ಭೇಟಿ ನೀಡುತ್ತಿರುವ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಇಂದು ಸಹ ಭೇಟಿ ನೀಡಿ, ಮತ ಎಣಿಕೆಗಾಗಿ ಕೈಗೊಂಡಿರುವ ಪೂರ್ವ ಸಿದ್ಧತೆಗಳನ್ನು, ಅಂತಿಮ ಕ್ಷಣದ ತಯಾರಿಯನ್ನು ಪರಿಶೀಲಿಸಿ ಸೂಕ್ತ ಸಲಹೆ ನೀಡಿದರು.

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕಾ ವೀಕ್ಷಕರಾದ ನಿತೀಶ್ವರ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹಾಗೂ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು ಮತ ಎಣಿಕಾ ಕೇಂದ್ರದಲ್ಲಿ ಉಪಸ್ಥಿತರಿದ್ದರು.

ಐಜಿಪಿ ಭೇಟಿ: ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಅವರು ಇಂದು ಸಂಜೆ ಮತ ಎಣಿಕಾ ಕೇಂದ್ರವಾದ ಸೈಂಟ್ ಸಿಸಿಲೀಸ್ ಶಾಲೆಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರಲ್ಲದೇ, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಹೊರಗಿನಿಂದ ಮತ ಎಣಿಕಾ ಕೇಂದ್ರಕ್ಕೆ ಒಂದು ಸುತ್ತು ಬಂದ ಅವರು ಕೈಗೊಂಡಿರುವ ಕ್ರಮಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ ಶೇ.75.91ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ ಒಟ್ಟು 12 ಮಂದಿ ಸ್ಪರ್ಧಿಗಳಿದ್ದು, ಹಾಲಿ ಸಂಸದೆ ಬಿಜೆಪಿಯ ಶೋಭಾ ಕರಂದ್ಲಾಜೆ ಹಾಗೂ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ನಿಂದ ಸ್ಪರ್ಧಿಸಿರುವ ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಅವರ ನಡುವಿನ ಜಿದ್ದಾಜಿದ್ದಿನ ಸೆಣಸಾಟದ ಹಣೆಬರಹ ನಿರ್ಧಾರಗೊಳ್ಳಲಿದೆ.

ಈ ಕ್ಷೇತ್ರದ ಒಟ್ಟು 15,13,231 ಮತದಾರರ ಪೈಕಿ 11,48,700 ಮಂದಿ ಎ.18ರಂದು ನಡೆದ ಮತದಾನದಲ್ಲಿ ಮತ ಚಲಾಯಿಸಿದ್ದರು. 7,38,503 ಪುರುಷ ಮತದಾರರಲ್ಲಿ 5,63,050 ಮಂದಿ ಹಾಗೂ 7,74,674 ಮಹಿಳಾ ಮತದಾರರ ಪೈಕಿ 5,85,645 ಮಂದಿ ಮತ ಚಲಾಯಿಸಿದ್ದಾರೆ. ಅಲ್ಲದೇ 54 ಮಂದಿ ಇತರೆ ಮತದಾರರಲ್ಲಿ ಐವರು ಮತದಾನ ಮಾಡಿದ್ದರು. ಈ ಎಲ್ಲಾ ಮತಗಳೊಂದಿಗೆ ಗುರುವಾರ 2049 ಅಂಚೆ ಮತಪತ್ರಗಳ ಎಣಿಕೆಯೂ ಮೊದಲಿಗೆ ನಡೆಯಬೇಕಾಗಿದೆ.

19 ಸುತ್ತುಗಳಲ್ಲಿ ಮತ ಎಣಿಕೆ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕನಿಷ್ಠ 15ರಿಂದ ಗರಿಷ್ಠ 19 ಸುತ್ತುಗಳಲ್ಲಿ ಮತಗಳ ಎಣಿಕೆ ನಡೆಯಲಿದೆ. ಅವುಗಳ ವಿವರ ಹೀಗಿದೆ.

ಕುಂದಾಪುರ ವಿಧಾನಸಭಾ ಕ್ಷೇತ್ರ: 222 ಮತಗಟ್ಟೆಗಳು-16 ಸುತ್ತುಗಳು,

ಉಡುಪಿ: 226-17, ಕಾಪು: 208-15ಸುತ್ತುಗಳು,

ಕಾರ್ಕಳ: 209-15, ಶೃಂಗೇರಿ: 256-19ಸುತ್ತುಗಳು,

ಮೂಡಿಗೆರೆ: 231-17ಸುತ್ತುಗಳು,

ಚಿಕ್ಕಮಗಳೂರು: 257-19 ಸುತ್ತುಗಳು,

ತರಿಕೆರೆ: 228-17 ಸುತ್ತುಗಳು.

ಪ್ರತಿ ಕ್ಷೇತ್ರದ ಮತ ಎಣಿಕೆ 14 ಮೇಜುಗಳಲ್ಲಿ ನಡೆಯಲಿವೆ. ಕುಂದಾಪುರ ಮತ್ತು ಕಾರ್ಕಳ ಕ್ಷೇತ್ರಗಳ ಮತ ಎಣಿಕೆ ಒಂದೇ ಕೋಣೆಯಲ್ಲಿ ನಡೆದರೆ, ಉಳಿದ ಆರು ಕ್ಷೇತ್ರಗಳ ಮತ ಎಣಿಕೆ ತಲಾ ಎರಡು ರೂಮುಗಳಲ್ಲಿ ನಡೆಯಲಿವೆ.

ಪೊಲೀಸರಿಂದ ಬಿಗುಭದ್ರತೆ: ಮತ ಎಣಿಕೆ ಸಂದರ್ಭ ಹಾಗೂ ಮತ ಎಣಿಕೆಯ ನಂತರ ಜಿಲ್ಲೆಯಾದಂತ್ಯ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸು ವರಿಷ್ಠಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು, ಗೃಹರಕ್ಷಕ ಸಿಬ್ಬಂದಿಗಳು ಮತ್ತು ಕೇಂದ್ರೀಯ ಆರೆಸೇನಾ ಪಡೆಗಳ ನೆವಿನೊಂದಿಗೆ ಬಂದೋಬಸ್ತ್ ನಡೆಯಲಿದೆ.

ಮತ ಎಣಿಕೆಯ ಬಂದೋಬಸ್ತ್ ಕರ್ತವ್ಯಕ್ಕಾಗಿ ಕೇಂದ್ರದಿಂದ ಒಂದು ತುಕುಡಿ ಕೇಂದ್ರೀಯ ಅರೆಸೇನಾ ಪಡೆ, ಮೂರು ತುಕುಡಿ ಕರ್ನಾಟಕ ರಾಜ್ಯ ಮೀಸಲು ಪಡೆ, ಡಿವೈಎಸ್‌ಪಿ-03, ಪಿಐ/ಸಿಪಿಐ-06, ಪೊಲೀಸ್ ಉಪನಿರೀಕ್ಷಕರು-23, ಪೊಲೀಸ್ ಸಿಬ್ಬಂದಿಗಳು-280 ಸೇರಿದಂತೆ ಗೃಹರಕ್ಷಕ ದಳದ ಸಿಬ್ಬಂದಿ-50 ಮಂದಿಯನ್ನು ನಿಯೋಜಿಸಲಾಗಿದೆ.

ಇವರನ್ನು ಮತ ಏಣಿಕೆ ಕೇಂದ್ರ ಮತ್ತು ಅದರ ಸುತ್ತಮುತ್ತಲೂ ಬಂದೋಬಸ್ತು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇಂದು ಎಸ್ಪಿ ನಿಶಾ ಜೇಮ್ಸ್ ಅವರ ಮೇಲುಸ್ತು ವಾರಿಯಲ್ಲಿ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಗಳಿಗೂ ಅವರವರ ಕರ್ತ್ಯಗಳನ್ನು ಹಂಚಿಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News