ಮತ ಎಣಿಕೆಗೆ ಸರ್ವ ಸನ್ನದ್ಧ: ಉಡುಪಿ ಜಿಲ್ಲಾಧಿಕಾರಿ

Update: 2019-05-22 13:00 GMT

ಉಡುಪಿ, ಮೇ 22: ಗುರುವಾರ ಸೈಂಟ್ ಸಿಸಿಲೀಸ್ ಶಾಲೆಯಲ್ಲಿ ನಡೆಯಲಿ ರುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ ಎಲ್ಲಾ ಸಿದ್ದತೆಗಳನ್ನು ಪೂರ್ಣಗೊಳಿಸಲಾಗಿದ್ದು, ಸರ್ವ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಬುಧವಾರ ಮತ ಎಣಿಕೆ ಕೇಂದ್ರದಲ್ಲಿನ ಸಿದ್ಧತೆಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ, ನಿಗದಿತ ಸಮಯಕ್ಕೆ ಸರಿಯಾಗಿ ಎಲ್ಲಾ ರೀತಿಯ ಪ್ರಕ್ರಿಯೆಗಳನ್ನು ಆರಂಭಿಸಲಾಗುವುದು. ಇವಿಎಂಗಳ ಎಣಿಕೆ ನಂತರ ವಿವಿಪ್ಯಾಟ್‌ನ ಸ್ಲಿಪ್‌ಗಳ ಎಣಿಕೆ ಮಾಡಲಾಗುವುದು. ಮತ ಎಣಿಕೆಗೆ ನಿಯೋಜಿಸಿರುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು, ಪಕ್ಷಗಳ ಎಜೆಂಟರು ಸೇರಿದಂತೆ ಎಲ್ಲರಿಗೂ ಮತದಾನ ಕೇಂದ್ರದಲ್ಲಿಯೇ ಊಟ, ಉಪಹಾರ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೆಪ್ಸಿಬಾ ರಾಣಿ ತಿಳಿಸಿದರು.

ಮತದಾನ ಕೇಂದ್ರದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ವೀಕ್ಷಕರ ಕಚೇರಿ, ಅಂಚೆಮತ ಪತ್ರ ಎಣಿಕೆ ಮತ್ತು ವಿವಿ ಪ್ಯಾಟ್ ಎಣಿಕೆಗೆ ಕೈಗೊಂಡಿರುವ ಎಲ್ಲಾ ಸಿದ್ದತೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಮತ ಎಣಿಕೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿವಿಪ್ಯಾಟ್ ಸ್ಲಿಪ್‌ಗಳ ಎಣಿಕೆ ನಂತರ ಅಂತಿಮ ಫಲಿತಾಂಶ ಘೋಷಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News